BBMP
Loading ...

money Bank

ನವದೆಹಲಿ: ಸೈಬರ್ ಅಪರಾಧ ತಡೆಗೆ ಸರ್ಕಾರ, ಪೊಲೀಸರು ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೈಬರ್ ಖದೀಮರೂ ಸಹ ವಂಚನೆಗೆ ಹೊಸ ವರಸೆ ಆರಂಭಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಕೇಸ್​ಗಳು ಮಿತಿಮೀರಿರುವ ಸಂದರ್ಭದಲ್ಲೇ ಬ್ಯಾಂಕ್ ಖಾತೆಗಳನ್ನು ಗುರಿಯಾಗಿಸುವ ಹೊಸ ಮಾಲ್‌ವೇರ್ ಸಕ್ರಿಯವಾಗುತ್ತಿದೆ.

ಹೌದು, ಟಾಕ್ಸಿಕ್ ಪಾಂಡ ಎಂದು ಕರೆಯಲ್ಪಡುವ ಈ ಮಾಲ್‌ವೇರ್ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಗೂಗಲ್ ಕ್ರೋಮ್‌ನಂತಹ ಅಪ್ಲಿಕೇಶನ್‌ಗಳ ನಕಲಿ ಆವೃತ್ತಿಗಳನ್ನು ಸೃಷ್ಟಿಸುವ ಮೂಲಕ ನಿಮ್ಮ ಫೋನ್‌ಗಳನ್ನು ಪ್ರವೇಶಿಸಬಹುದು. ಈ ಡೇಂಜರಸ್​ ಪಾಂಡ ಮಾಲ್​ವೇರ್​ ಅನ್ನು ಕ್ಲೀಫಿ ಥ್ರೆಟ್ ಇಂಟೆಲಿಜೆನ್ಸ್ ಎಂಬ ಸೈಬರ್ ಭದ್ರತಾ ಸಂಸ್ಥೆ ಕಂಡುಹಿಡಿದಿದೆ.

ಗೂಗಲ್​ ಪ್ಲೇ ಸ್ಟೋರ್​ನಂತಹ ಅಧಿಕೃತ ಆ್ಯಪ್​ ಸ್ಟೋರ್​ಗಳನ್ನು ಬಿಟ್ಟು ಥರ್ಡ್​ ಪಾರ್ಟಿ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿದಾಗ ಅದರ ಮೂಲಕ ಈ ಪಾಂಡ ಮಾಲ್​ವೇರ್​ ನಿಮ್ಮ ಫೋನ್​ ಅನ್ನು ಸೇರುತ್ತದೆ. ಇಂತಹ ಮಾಲ್‌ವೇರ್‌ಗಳ ಮುಖ್ಯ ಉದ್ದೇಶವೇನೆಂದರೆ ಅಂಡ್ರಾಯ್ಡ್ ಫೋನ್‌ಗಳಿಂದ ಖಾತೆ ಟಾಕ್‌ಓವರ್ ಮತ್ತು ಆನ್-ಡಿವೈಸ್ ವಂಚನೆಯ ಮೂಲಕ ಹಣವನ್ನು ವರ್ಗಾಯಿಸುವುದು. TGToxic ಎಂಬ ಮಾಲ್​ವೇರ್​ ವರ್ಗದಿಂದ ಇದನ್ನು ರಚಿಸಲಾಗಿದೆ.

ಈ ಟಾಕ್ಸಿಕ್ ಪಾಂಡ ನಿಮ್ಮ ಬ್ಯಾಂಕಿನ ಭದ್ರತಾ ವ್ಯವಸ್ಥೆಗಳನ್ನೇ ಬೈಪಾಸ್ ಮಾಡಿ, ಖಾತೆಯಿಂದ ಹಣ ಎಗರಿಸುತ್ತದೆ. ಈ ಮಾಲ್​ವೇರ್​ನಲ್ಲಿ ನಿಮ್ಮ ಗುರುತಿನ ಪರಿಶೀಲನೆ ಮತ್ತು ದೃಢೀಕರಣ, ಹಾಗೆಯೇ ನಿಮ್ಮ ನಗದು ವಹಿವಾಟುಗಳನ್ನು ಪತ್ತೆ ಹಚ್ಚುವ ತಂತ್ರಗಳಿವೆ. ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯುವಾಗ OTP ಸಂದೇಶ ಸ್ವೀಕರಿಸುವುದನ್ನು ಸಹ ಇದು ತಪ್ಪಿಸಬಹುದು.

ಇನ್ನು ಈ ಮಾಲ್​ವೇರ್​ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇದನ್ನು ಹಾಂಗ್​ಕಾಂಗ್​ನಲ್ಲಿ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಈ ಟಾಕ್ಸಿಕ್ ಪಾಂಡ ಅಂಡ್ರಾಯ್ಡ್​ ಫೋನ್‌ಗಳಲ್ಲಿ ಸುಲಭವಾಗಿ ಪ್ರವೇಶಿಸುತ್ತವೆ. ಈ ಮಾಲ್​ವೇರ್​ ಮೂಲಕ ನಿಮ್ಮ ಫೋನ್ ಅನ್ನು ಬೇರೆ ಸ್ಥಳದಿಂದ ನಿಯಂತ್ರಿಸಲು ಸಾಧ್ಯವಿದೆ. ಇಂತಹ ಮಾಲ್‌ವೇರ್‌ಗಳನ್ನು ಪರಿಚಯಿಸುವ ಮೂಲಕ ವಂಚಕರು, ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ಎಗರಿಸುತ್ತಾರೆ ಹುಶಾರ್​!

ಇಂತಹ ಮಾಲ್​ವೇರ್​ಗಳಿಂದ ನಿಮ್ಮ ಬ್ಯಾಂಕ್​ ಖಾತೆಯನ್ನು ರಕ್ಷಣೆ ಮಾಡಲು ಬಯಸುವುದಾದರೆ, ಗೂಗಲ್​ ಪ್ಲೇಸ್ಟೋರ್​ನಂತಹ ಅಧಿಕೃತ ಆ್ಯಪ್​ ಸ್ಟೋರ್​ಗಳನ್ನು ಬಿಟ್ಟು ಬೇರೆ ಯಾವುದೇ ಥರ್ಡ್​ ಪಾರ್ಟಿ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುವ ಪ್ರಯತ್ನವನ್ನು ಸಹ ಮಾಡಬೇಡಿ. ನಿಮ್ಮ ಭದ್ರತಾ ವ್ಯವಸ್ಥೆಯನ್ನು ಆಗಾಗ ಅಪ್​ಡೇಟ್​ ಮಾಡುತ್ತಿರಿ. ಯಾವುದೇ ಮೊಬೈಲ್​ ಕಂಪನಿ ಅಪ್​ಡೇಟ್​ಗಳನ್ನು ಪರಿಚಯಿಸಿದರೆ ತಕ್ಷಣವೇ ಅಪ್​ಡೇಟ್​ ಮಾಡಿಕೊಳ್ಳಿ. ಅನವಶ್ಯಕ ಲಿಂಕ್​ಗಳ ಮೇಲೆ ಕ್ಲಿಕ್​ ಮಾಡದಿರಿ. ನಿಮ್ಮ ಮೊಬೈಲ್​ಗೆ ಬರುವ ಮೆಸೇಜ್​ಗಳ ಮೇಲೆಯೂ ನಿಗಾ ಇಡಿ. ಅನಗತ್ಯ ಮೆಸೇಜ್​ಗಳಿಗೆ ಪ್ರತಿಕ್ರಿಯಿಸಬೇಡಿ. ಇದನ್ನು ಅನುಸರಿಸಿದರೆ ಮಾತ್ರ ಪಾಂಡ ಮಾಲ್​ವೇರ್​ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

WATCH VIDEO | ಇ-ಖಾತಾ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ವಿಡಿಯೋ, ಕಂಪ್ಲೀಟ್ ಡೀಟೆಲ್ಸ್‌!

Leave a Reply

Your email address will not be published. Required fields are marked *