BBMP
Loading ...

BBMP

ಬೆಂಗಳೂರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಬಿಬಿಎಂಪಿ ಬಿಸಿ ಮುಟ್ಟಿಸುತ್ತಿದೆ. ಇನ್ನು ಇ – ಖಾತಾದಲ್ಲಿ ಗೊಂದಲ ಹಾಗೂ ಅನುಮಾನಗಳನ್ನು ನಿವಾರಿಸುವ ಉದ್ದೇಶದಿಂದ ಸಂಪೂರ್ಣ ವಿಡಿಯೋ ಮಾಹಿತಿಯನ್ನು ಸಹ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ (ವಸತಿಯೇತರ) ವಾಣಿಜ್ಯ ಕಟ್ಟಡಗಳಿಗೆ ಬೀಗ ಮುದ್ರೆ ಹಾಕುವುದಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್‌ ಅವರು ಮಹತ್ವದ ಆದೇಶವೊಂದನ್ನು ನೀಡಿದ್ದಾರೆ.

ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು (ಆಸ್ತಿದಾರರು) ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಿ ಎಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳು ಇವೆ. ಆಯಾ ವಲಯಗಳ ಸಹಾಯಕ ಕಂದಾಯ ಅಧಿಕಾರಿ ವ್ಯಾಪ್ತಿವಾರು ಸಭೆ ನಡೆಸಿ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಾಗೂ ಪರಿಷ್ಕರಣೆ ಪ್ರಕರಣಗಳ ಪಟ್ಟಿಯ ಅನುಸಾರ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

ಒಟಿಎಸ್ ಯೋಜನೆ ಜನರಲ್ಲಿ ಇನ್ನಷ್ಟು ಜಾಗೃತಿ: ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ. ಈ ಯೋಜನೆಯು ನವೆಂಬರ್ 30ನೇ ವರೆಗೆ ಮಾತ್ರ ಇರಲಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಕೂಡಲೇ ಪಾವತಿ ಮಾಡುವಂತೆ ಬಿಬಿಎಂಪಿ ಹೇಳಿದೆ.

ಅಲ್ಲದೇ ಬಿಬಿಎಂಪಿಯ BBMPtax.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಹಣ ತುಂಬಿಸಬಹುದಾಗಿದೆ. ಇಲ್ಲದಿದ್ದರೆ, ಡಿಸೆಂಬರ್ 1ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆಯು ದುಪ್ಪಟ್ಟಾಗಲಿದೆ. ಈ ಬಗ್ಗೆ ನಗರದ ಜನರಲ್ಲಿ ಕೂಡಲೇ ಜಾಗೃತಿ ಮೂಡಿಸಿ ಎಂದು ಬಿಬಿಎಂಪಿಯ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ವ್ಯವಸ್ಥೆ: ಇ-ಖಾತಾ ಪಡೆಯಲು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಂಗಳೂರು ಒನ್ ಕೇಂದ್ರದಲ್ಲೂ ಇ-ಖಾತಾ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ದಾಖಲೆಗಳೊಂದಿಗೆ 45 ರೂಪಾಯಿ ಪಾವತಿಸಿದರೆ ಇ-ಖಾತಾ ಸಿಗಲಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಇ-ಖಾತಾ ಪಡೆಯುವ ವೀಡಿಯೋ ಬಿಡುಗಡೆ: ಆಸ್ತಿದಾರರು ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಸಲುವಾಗಿ ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯ ವೀಡಿಯೋ ಅಪ್ಲೋಡ್‌ ಮಾಡಲಾಗಿದೆ. ಈ ವೀಡಿಯೋ ನೋಡಿಕೊಂಡು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ.

ವಲಯವಾರು ಇ-ಖಾತಾ ಸಹಾಯವಾಣಿ: ಬೆಂಗಳೂರಿನಲ್ಲಿ ಇ – ಖಾತಾದಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿರುವುದಾಗಿ ಸಾರ್ವಜನಿಕರು ಹೇಳಿದ್ದರು. ಇದೀಗ ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬೆಂಗಳೂರಿನಲ್ಲಿ ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ. ಈ ಕೇಂದ್ರದ ಸಹಾಯವಾಣಿ ನಂಬರ್‌ಗೆ ಕಾಲ್‌ ಮಾಡಿದರೆ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಬಿಬಿಎಂಪಿ ಹೇಳಿದೆ.

ವಲಯ – ಸಹಾಯವಾಣಿ ಸಂಖ್ಯೆ
1. ಬೊಮ್ಮನಹಳ್ಳಿ ವಲಯ: 9480683182 / 9480683712
2. ದಾಸರಹಾಳ್ಳಿ ವಲಯ: 9480683710
3. ಮಹಾದೇವಪುರ ವಲಯ: 9480683718 / 9480683720
4. ಪೂರ್ವ ವಲಯ: 9480683203
5. ಪಶ್ಚಿಮ ವಲಯ: 9480683653 / 9480683204
6. ದಕ್ಷಿಣ ವಲಯ: 9480683638 / 9480683179
7. ರಾಜರಾಜೇಶ್ವರಿ ನಗರ ವಲಯ: 9480683576
8. ಯಲಹಂಕ ವಲಯ: 9480683645 / 9480683516

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಡಿ.1ರಿಂದ ಕಟ್ಟಡಕ್ಕೆ ಬೀಗ! ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

Leave a Reply

Your email address will not be published. Required fields are marked *