ಬೆಂಗಳೂರು: ಕಾಂಗ್ರೆಸ್ ನ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸಪ್ ಮೂಲಕ ವಿಡಿಯೊ ಕರೆಗಳನ್ನು ಮಾಡಿ ಅವುಗಳನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಲಪಾಡ್ ಬ್ರಿಗೇಡ್ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡೀಲ್ ಕುದುರಿಸಲು ಬೆಂಗಳೂರಿಗೆ ಆಗಮಿಸಿದ್ದ ದಂಪತಿ ಮಾಲೀಕಯ್ಯ ಪುತ್ರ ರಿತೀಶ್ ಅವರನ್ನು ಭೇಟಿಯಾಗಿದ್ದರು. ಈ ವಿಚಾರವಾಗಿ ರಿತೇಶ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಎಂಟು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಂಧಿತ ಮಂಜುಳಾ ಪಾಟೀಲ್ ಬ್ಯಾಗ್ ನಲ್ಲಿ 6 ಸ್ಮಾರ್ಟ್ ಪೋನ್ ಪತ್ತೆಯಾಗಿವೆ. ಈ ಆರು ಫೋನ್ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ, ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದಾರೆ.


