ಆರೋಪಿ ವ್ಯಕ್ತಿ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡರೂ ಆರೋಪ ಸಾಬೀತುಪಡಿಸಲು ಸೂಕ್ತ ‘ಪುರಾವೆ’ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಕೊರಿಯರ್ನಲ್ಲಿ ಗಾಂಜಾ ತರಿಸಿದ ಪ್ರಕರಣದಲ್ಲಿ 25 ವರ್ಷದ ಯುವಕನ ವಿರುದ್ಧ ನಾಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ. ಆರೋಪ ಪುಷ್ಟೀಕರಿಸುವಂತಹ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಯುವಕ ಖುಲಾಸೆಯಾಗಿದ್ದಾನೆ. ಎನ್ಸಿಬಿ ಅಧಿಕಾರಿಗಳು ದಾಖಲಿಸಿರುವ ದೂರು, ಎನ್ಡಿಪಿಸಿ ಪ್ರಕರಣಗಳ ವಿಚಾರಣಾ ನ್ಯಾಯಾಲಯದಲ್ಲಿನ ಎಲ್ಲ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರಿನ ಬೆಳ್ಳಂದೂರು ನಿವಾಸಿ ಸೈಕತ್ ಭಟ್ಟಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
ಆದೇಶವೇನು?
ಅರ್ಜಿದಾರರು ಗಾಂಜಾ ತರಿಸಿರುವ ಕುರಿತು ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ಹೊರತುಪಡಿಸಿ, ಎನ್ಸಿಬಿ ಅಧಿಕಾರಿಗಳು ಬೇರ್ಯಾವ ದಾಖಲೆ ಪ್ರಸ್ತುತಪಡಿಸಿಲ್ಲ, ಆರೋಪ ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ. ಜತೆಗೆ ವಶಪಡಿಸಿಕೊಂಡ ಪಾರ್ಸೆಲ್ನಲ್ಲಿ ಗಾಂಜಾ ಇತ್ತಾದರೂ ಕವರ್ ಮೇಲೆ ದೂರವಾಣಿ ಸಂಖ್ಯೆ ಹೊರತಾಗಿ ಅರ್ಜಿದಾರರ ಹೆಸರು, ವಿಳಾಸ ಇಲ್ಲ. ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 67ರ ಅನ್ವಯ ಆರೋಪಿಯ ಸ್ವಯಂಪ್ರೇರಿತ ಹೇಳಿಕೆಗಳನ್ನು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 25ರ ಅನ್ವಯ ಸಾಕ್ಷ್ಯವಾಗಿ ಪರಿಗಣಿಸಲಾಗುವುದಿಲ್ಲ. ಹೆಚ್ಚುವರಿ ಸಾಕ್ಷ್ಯಾಧಾರವಿಲ್ಲದೆ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆ ಮಾಡಿದಂತಾಗುತ್ತದೆ. ಅಲ್ಲದೆ, ನ್ಯಾಯದಾನದಲ್ಲಿ ತಪ್ಪು ಎಸಗಿದಂತಾಗುತ್ತದೆ. ಹೀಗಾಗಿ ಅರ್ಜಿದಾರರ ವಿರುದ್ಧದ ಕೋರ್ಟ್ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?
ಹೆಬ್ಬಾಳದಲ್ಲಿರುವ ಮಾರುತಿ ಕೊರಿಯರ್ ಸರ್ವೀಸಸ್ ಪ್ರೖೆ.ಲಿ. ಕಚೇರಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿತ್ತು. ಇದರ ಜಾಡು ಹಿಡಿದು 2022ರ ನ.30ರಂದು ಹೆಬ್ಬಾಳ ಪೊಲೀಸರ ತಂಡ ಕಚೇರಿಗೆ ತೆರಳಿ ಪರಿಶೀಲಿಸಿದಾಗ 4 ವಿವಿಧ ಪಾರ್ಸೆಲ್ಗಳಲ್ಲಿ ಗಾಂಜಾ ಪತ್ತೆಯಾಗಿತ್ತು. ನಂತರ ಎನ್ಸಿಬಿ ಅಧಿಕಾರಿಗಳು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರ್ಜಿದಾರರನ್ನು ವಿಚಾರಣೆಗೊಳಪಡಿಸಿದಾಗ ಗಾಂಜಾ ಆರ್ಡರ್ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. ‘ರಾಜಾ ಸಹಾ ಎಂಬ ವ್ಯಕ್ತಿಗೆ ಗಾಂಜಾ ನೀಡುವಂತೆ ವಾಟ್ಸ್ಆಪ್ನಲ್ಲಿ ಸಂದೇಶ ಕಳಿಸಿದ್ದೆ. ಆ ಪ್ರಕಾರವಾಗಿ ಆತ ನನ್ನ ವಿಳಾಸಕ್ಕೆ ಪಾರ್ಸೆಲ್ ಮಾಡಿದ್ದ ಎಂದು ಅರ್ಜಿದಾರ ತಪ್ಪೊಪ್ಪಿಕೊಂಡಿದ್ದ. ಈ ಹೇಳಿಕೆ ಆಧರಿಸಿ ಅರ್ಜಿದಾರರನ್ನು ಬಂಧಿಸಲಾಗಿತ್ತು. ಬಳಿಕ ಆತ ನಂತರ ಜಾಮೀನು ಪಡೆದು ಹೊರಬಂದಿದ್ದ.
ಅರ್ಜಿದಾರರ ವಾದ
* ನೇರವಾಗಿ ಗಾಂಜಾ ಜಪ್ತಿ ಮಾಡಿಲ್ಲ
* ಕೊರಿಯರ್ ಪಾರ್ಸೆಲ್ನಲ್ಲಿ ಮೊಬೈಲ್ ಸಂಖ್ಯೆಯಷ್ಟೇ ನಮೂದು
* ಪಾರ್ಸೆಲ್ನಲ್ಲಿ ಅರ್ಜಿದಾರರ ಹೆಸರು, ವಿಳಾಸ ಉಲ್ಲೇಖವಾಗಿಲ್ಲ
* ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 67ರ ಉಲ್ಲಂಘನೆ ಇಲ್ಲಿ ಸ್ಪಷ್ಟ
* ಆರೋಪಿಯ ಸ್ವಯಂ ಪ್ರೇರಿತ ಹೇಳಿಕೆಗಳನ್ನು ಪರಿಗಣಿಸಲ್ಲ
* ಸಾಕ್ಷ್ಯ ಕೊರತೆ, ಆರೋಪ ಎತ್ತಿ ಹಿಡಿಯಲು ಪ್ರಾಸಿಕ್ಯೂಷನ್ ವಿಫಲ
ಎನ್ಸಿಬಿ ವಾದ
* ಆರೋಪಿ ಪತ್ತೆ ಹೇಗೆ ಆಯಿತು ಎಂಬುದು ಇಲ್ಲಿ ಮುಖ್ಯವೇ ಅಲ್ಲ
*ಆರೋಪಿ ಅಪರಾಧದಲ್ಲಿ ಹೇಗೆ ಭಾಗಿ ಎಂಬುದು ಗಮನಿಸಬೇಕು
* ಕೊರಿಯರ್ ಕಚೇರಿಗೆ ಬಂದ 4 ಪಾರ್ಸೆಲ್ನಲ್ಲಿ ಗಾಂಜಾ ಪತ್ತೆ
ಕವರ್ ಮೇಲಿನ ಮೊಬೈಲ್ ಸಂಖ್ಯೆ ಆಧಾರದ ಮೇಲೆ ದೂರು
ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳ ಸಾಥ್ : ದೂರು ನೀಡಿದರೂ ಉದ್ದೇಶಪೂರ್ವಕ ನಿರ್ಲಕ್ಷ್ಯ!


