BBMP
Loading ...

BNG Rain

ಬೆಂಗಳೂರು: ಇಂದು ಬೆಳಗ್ಗೆ ಏಳು ಗಂಟೆ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದಾನೆ. ಹಾಗಂತ ಮಳೆರಾಯನ ಆರ್ಭಟ ಇಷ್ಟಕ್ಕೆ ನಿಲ್ಲುವುದಿಲ್ಲ.  ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಇಂದು (ಅ.21) ಬೆಳಗ್ಗೆ ಎಚ್ಚರಿಕೆ ನೀಡಿದೆ.

ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಹಾಗೂ ಸಣ್ಣಪುಟ್ಟ ಸಂಚಾರ ದಟ್ಟಣೆ ಉಂಟಾಗಲಿದೆ. ದುರ್ಬಲ ಮರದ ಕೊಂಬೆಗಳು ಮುರಿದು ಬೀಳುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆ ಕಾರಣ ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಹೊರಗಿನ ಪ್ರಯಾಣವನ್ನು ತಪ್ಪಿಸಿ, ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಅಲ್ಲದೆ, ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ. ನಿಮ್ಮ ಮನೆಯ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಹವಾಮಾನ ಇಲಾಖೆ ಸಲಹೆಗಳನ್ನು ನೀಡಿದೆ.

ಆಕಾಶ ತೂತಾದಂತೆ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ಬೆಂಗಳೂರಿನ ಜನತೆ ಹೈರಾಣಾಗಿದ್ದಾರೆ. ಬಿಟ್ಟುಬಿಡದೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಹಾ ಮಳೆಗೆ ಬೆಂಗಳೂರು ಮಹಾನಗರ ಭಾಗಶಃ ಮುಳುಗಡೆಯಾಗಿದೆ. ಇಂದು (ಅ.21) ಬೆಳ್ಳಂಬೆಳಗ್ಗೆ ಎಂಟ್ರಿ ಕೊಟ್ಟಿರುವ ಮಳೆರಾಯ ಬೆಂಗಳೂರು ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದು, ಹಲವಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಬೆಂಗಳೂರಿನ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದೆ. ನಿನ್ನಿ ರಾತ್ರಿ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ತಡರಾತ್ರಿ 2 ಗಂಟೆ ಸುಮಾರಿಗೆ ಆರಂಭವಾಗಿ ಮತ್ತೆ ನಿಂತೇ ಇಲ್ಲ. ನಿರಂತವಾಗಿ ಮಳೆಯಾಗುತ್ತಲೇ ಇದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಂತೂ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ಅದನ್ನು ಹೊರಗಾಕುವಲ್ಲಿ ನಿವಾಸಿಗಳು ಹೈರಾಣಾಗಿದ್ದಾರೆ. ಚರಂಡಿಗಳು ಕೂಡ ತುಂಬಿ ಹರಿಯುತ್ತಿದ್ದು, ಕೊಳಚೆ ನೀರು ಹಲವೆಡೆ ಮನೆಗಳಿಗೆ ನುಗ್ಗಿದೆ.

ಇನ್ನು ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ತೀವ್ರ ಪರದಾಟ ನಡೆಸಿದ್ದಾರೆ. ಕೆಲ ರಸ್ತೆಗಳಲ್ಲಿ ನೀರು ತುಂಬಿದ್ದು, ಎಲ್ಲಿ ಗುಂಡಿಯಿದೆ ಮತ್ತು ಚೇಂಬರ್​ ಎಲ್ಲಾದರೂ ಓಪನ್​ ಆಗಿದೆಯೇ ಎಂಬ ಭಯದಲ್ಲೇ ಜನರು ಓಡಾಡುವಂತಾಗಿದೆ. ಇನ್ನು ಬೆಂಗಳೂರು ಮಾರುಕಟ್ಟೆಯಲ್ಲಂತೂ ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧವಾಗಿದೆ. ಬೆಳ್ಳಂಬೆಳಗ್ಗೆ ಗಿಜುಗುಡುತ್ತಿದ್ದ ಮಾರುಕಟ್ಟೆ ಮಳೆಯ ಆರ್ಭಟಕ್ಕೆ ಮೌನವಾಗಿದೆ.

ಜನರ ಮುಂಜಾನೆ ಚಟುವಟಿಕೆಗೆ ವರುಣ ಬ್ರೇಕ್​ ಹಾಕಿದ್ದಾನೆ. ಇನ್ನು ಹಲವೆಡೆ ಅಂಡರ್​ಪಾಸ್​ಗಳಲ್ಲಿ ನೀರು ತುಂಬಿದ್ದು, ಅಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್​ ಬಿಸಿ ಕೂಡ ಮುಟ್ಟಿದೆ. ಬೆಳಗಿನ ಪಾಳಿಯಲ್ಲಿ ಕೆಲಸಕ್ಕೆ ಹೋಗಬೇಕಾದ ಬಹುತೇಕ ಮಂದಿ ಮಳೆ ನೀರಿನ ಸ್ನಾನ ಮಾಡಿಕೊಂಡೇ ತಮ್ಮ ಕಚೇರಿಗಳನ್ನು ತಲುಪಿದ್ದಾರೆ.​

ನಗರದ ಮೆಜೆಸ್ಟಿಕ್, ಚಾಮರಾಜಪೇಟೆ, ಮೈಸೂರು ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ವಿಧಾನಸೌಧ, ಶಾಂತಿನಗರ, ಜಯನಗರ, ತ್ಯಾಗರಾಜನಗರ, ಶ್ರೀನಗರ, ಕೆಆರ್ ಮಾರುಕಟ್ಟೆ, ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ ಹಾಗೂ ಮಲ್ಲೇಶ್ವರಂ, ಜಾಲಹಳ್ಳಿ, ಹೆಬ್ಬಾಳ, ಮಾಗಡಿ ರಸ್ತೆ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆಆರ್ ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ, ಬೆಳ್ಳಂದೂರು, ಮಾರತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜೆಪಿ ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, ಆರ್.ಆರ್. ನಗರ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವಡೆ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಸತತ ಮಳೆ ಹಿನ್ನೆಲೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಇಂದು ಶಾಲೆಗಳಿಗೆ ರಜೆ: ಜಿಲ್ಲಾಧಿಕಾರಿ ಜಗದೀಶ್ ಘೋಷಣೆ

Leave a Reply

Your email address will not be published. Required fields are marked *