ಹಾಸನ: ನೀರಿನ ಮಧ್ಯ ಇದ್ದ ಕಂಬ ಏರಿ ವಿದ್ಯುತ್ ತಂತಿ ದುರಸ್ತಿಯನ್ನು ಲೈನ್ಮ್ಯಾನ್ವೊಬ್ಬರು ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಸನದ ಹೇಮಾವತಿ ಜಲಾಶಯದ ನೀರಿನ ಮಧ್ಯೆ ವಿದ್ಯುತ್ ತಂತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ತೆಪ್ಪದಲ್ಲಿ ತೆರಳಿದ ಸಹಾಯಕ ಮಾರ್ಗದರ್ಶಿ ಹರೀಶ್ಕುಮಾರ್.ಎಚ್.ವಿ. ವಿದ್ಯುತ್ ಕಂಬವನ್ನು ಏರಿ ರಿಪೇರಿ ಮಾಡಿದ್ದಾರೆ.
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಣಿಗನಹಳ್ಳಿ ಗ್ರಾಮದ ಬಳಿ ಈ ದುರಸ್ತಿ ಕಾರ್ಯ ಮಾಡಲಾಗಿದೆ. ಆಲೂರು ತಾಲ್ಲೂಕಿನ, ಕುಂದೂರು ಹೋಬಳಿ, ಹಂಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಣಿಗನಹಳ್ಳಿ ಗ್ರಾಮವಿದು. ಗೊರೂರು ಜಲಾಶಯದ ಹಿನ್ನೀರಿನಲ್ಲಿ ಮಗ್ಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಕಡಬಗಾಲ ಕ್ರಾಸ್ ಮಾರ್ಗಕ್ಕೆ ಹಾದು ಹೋಗಿರುವ 11 ಕೆವಿ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಮಾರ್ಗದ ಮಧ್ಯೆ ಇರುವ ವಿದ್ಯುತ್ ಕಂಬ ಒಂದರಲ್ಲಿ 11 ಕೆವಿ ಪಿನ್ ಇನ್ಸುಲೇಟರ್ ಕಳಚಿ ಬಿದ್ದಿತ್ತು. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಆಡಚಣೆ ಉಂಟಾಗಿತ್ತು.
ಇದನ್ನು ಪರಿಶೀಲಿಸಿದ ಪಾಳ್ಯ ಶಾಖೆಯ ಸಹಾಯಕ ಹರೀಶ್ಕುಮಾರ್ ಅವರಿಗೆ ದುರಸ್ತಿ ಮಾಡುವಂತೆ ಶಾಖೆಯ ಜೂನಿಯರ್ ಇಂಜಿನಿಯರ್ ಪ್ರಕಾಶ್ ಮಾರ್ಗದರ್ಶನ ನೀಡಿದ್ದರು. ಇದರಿಂದಾಗಿ ನುರಿತ ಈಜುಗಾರರ ಜೊತೆ ತೆಪ್ಪದಲ್ಲಿ ತೆರಳಿದ ಲೈನ್ಮ್ಯಾನ್ ಹರೀಶ್ಕುಮಾರ್ ರಿಪೇರಿ ಮಾಡಿದ್ದಾರೆ. ಹರೀಶ್ಕುಮಾರ್ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.


