ರಾಮನಗರ: ಮುಡಾ ಹಗರಣ ಸಂಬಂಧ ಸಿಎಂ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಎ1 ಮಾಡಲಾಗಿದೆ. ಸದ್ಯ ಆರೋಪಿಗಳಿಗೆ ನೋಟಿಸ್ ಕೊಡಲು ಲೋಕಾ ಅಧಿಕಾರಿಗಳು ತಯಾರಿ ನಡೆಸ್ತಿದ್ದಾರೆ. ಇವತ್ತು ರಜಾ ದಿನವೂ ಲೋಕಾ ಎಸ್ಪಿ ಉದೇಶ್ ಕಚೇರಿಗೆ ಆಗಮಿಸಿದ್ದಾರೆ.
ಸೋಮವಾರವೇ ಆರೋಪಿಗಳಿಗೆ ನೋಟಿಸ್ ನೀಡಲು ಈಗಿನಿಂದಲೇ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ತಿದ್ದಾರೆ. ಇತ್ತ ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪಾಲಿಟಿಕ್ಸ್ ಜೋರಾಗಿದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ಕಾಂಗ್ರೆಸ್ನ ಕೆಲ ಹಿರಿಯ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಆಗ್ರಹಿಸಿದ್ದಾರೆ. ಇದರ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಕನಕಪುರದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನಿಮ್ಮ ತಂದೆ-ತಾಯಂದಿರು ನನಗೆ ಸಹಾಯ ಮಾಡಿದ್ದಾರೆ. ಬೆಳೆಸಿದ್ದಾರೆ, ಹರಸಿದ್ದಾರೆ, ಸಹಕಾರ ಕೊಟ್ಟಿದ್ದಾರೆ. ನಾನು ರಾಜ್ಯದ ಸೇವೆ ಮಾಡಬೇಕೆಂದು ದೊಡ್ಡ ಪ್ರಯತ್ನ – ಹೋರಾಟ ನಡೆಯುತ್ತಿದೆ. ಈಗ ಹೇಳಿದರೆ ಮಾಧ್ಯಮದವರು ಬೇರೆ ರೀತಿ ಬಿಂಬಿಸುತ್ತಿದ್ದಾರೆ, ಯಾರು ಏನು ಬೇಕಾದರೂ ಬಿಂಬಿಸಲಿ. ನಾನು ಡಿಸಿಎಂ ಆಗಿ ಬಂದಿಲ್ಲ, ಒಬ್ಬ ಶಾಸಕ, ನಿಮ್ಮ ಸೇವಕನಾಗಿ ಬಂದಿದ್ದೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಹಾತ್ಮ ಗಾಂಧಿಜಿ ನಾಯಕತ್ವ ವಹಿಸಿ 100 ವರ್ಷ ಆಯ್ತು. ಸ್ವಾತಂತ್ರ್ಯ ಹೋರಾಟ ನಾಯಕತ್ವ ವಹಿಸಿದ್ದ ಗಾಂಧಿ ಅವರ ಜನ್ಮದಿನವನ್ನು ಹಬ್ಬದ ರೀತಿ ಆಚರಣೆ ಮಾಡ್ತೀವಿ. ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೀವಿ, ಅವರ ಆಚಾರ ವಿಚಾರ ತಿಳಿಸಲು. ಎರಡನೇ ತಾರೀಖು ಸ್ವಚ್ಚತಾ ಕಾರ್ಯಕ್ರಮ ರೂಪಿಸಿದ್ದೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕಿಲೋ ಮೀಟರ್ ಗಾಂಧಿ ನಡಿಗೆ ಹಮ್ಮಿಕೊಂಡಿದ್ದೇವೆ. ತಾಲೂಕು, ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಇದಕ್ಕೆ ಶಾಸಕರು, ಜಿಲ್ಲಾ ಮಂತ್ರಿಗಳು ಸಾಥ್ ಕೊಡಬೇಕು, ಬಿಳಿ ಬಟ್ಟೆ ಧರಿಸಿ ಗಾಂಧಿ ನಡಿಗೆ ಮಾಡಬೇಕು. ಸ್ವಚ್ಚತೆ ಬಗ್ಗೆ ಒಂದು ಪ್ರತಿಜ್ಞೆ ಮಾಡಬೇಕು ಅಂತಾ ಹೇಳಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಸಿಎಂ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಅದರ ಬಗ್ಗೆ ಎಐಸಿಸಿ ಅಧ್ಯಕ್ಷರೇ ಮಾತನಾಡಿದ್ದಾರೆ, ಹಾಗಾಗಿ ಹೆಚ್ಚಿಗೆ ಹೇಳುವುದೇನಿಲ್ಲ ಎಂದರು.
ಸಿಬಿಐ ಮುಕ್ತ ತನಿಖೆಯ ಅಧಿಸೂಚನೆ ವಾಪಾಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿಬಿಐನವ್ರು ಏನೇನ್ ಮಾಡ್ತಿದ್ದಾರೆ ಅಂತ ಚರ್ಚೆ ಮಾಡೋದು ಬೇಡ. ಹಿಂದೆ ಜೆಡಿಎಸ್ ದೇವೇಗೌಡರು, ಬಿಜೆಪಿಯವರು ಏನೇಲ್ಲಾ ಮಾತನಾಡಿದರು ಗೊತ್ತಿದೆ. ಕಾಂಗ್ರೆಸ್ ಬ್ಯೂರೋ ಇನ್ವೆಸ್ಟಿಗೇಷನ್ ಏಜೆನ್ಸಿ ಅಂತ ಮಾತನಾಡಿದ್ದರು. ಹಿಂದೆ ಅವರು ಎಷ್ಟು ಕೇಸ್ ಕೊಟ್ಟಿದ್ದರು, ಏನ್ ಕೇಸಾಗಿದೆ. ಐಎಂಎ ಕೇಸ್‌ನಲ್ಲಿ ಏನ್ ರಿಪೋರ್ಟ್ ಆಗಿದೆ ಚರ್ಚೆ ಬೇಡ, ಸರ್ಕಾರ ಪರಿಶೀಲನೆ ಮಾಡಿ ರಾಜ್ಯದ ಹಿತಕ್ಕೆ, ದ್ವೇಷದ ರಾಜಕಾರಣಕ್ಕೆ ಸಿಬಿಐ ಒಳಪಡಬಾರದೆಂಬ ದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇವೆ. ಏನಾದರೂ ಎಮರ್ಜೆನ್ಸಿ ಇದ್ದರೆ, ನಮ್ಮ ಅಧಿಕಾರಿಗಳಿಗೆ ಇಲ್ಲ ಅಂದರೆ ಯೋಚನೆ ಮಾಡ್ತೀವಿ ಎಂದು ತಿಳಿಸಿದ್ದರು.
ವಿತ್ತ ಸಚಿವೆ ವಿರುದ್ಧ ಎಫ್ಐಆರ್ ದಾಖಲು: ಎ1 ನಿರ್ಮಲಾ ಸೀತಾರಾಮನ್, ಎ4 ನಳಿನ್ ಕುಮಾರ್ ಕಟೀಲ್


