ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯಲ್ಲಿ ಇದೀಗ ಮತ್ತೊಂದು ಬಹುಕೋಟಿ ಹಗರಣ ಸದ್ದು ಮಾಡುತ್ತಿದೆ. ಅದು ಸಹ ಪೌರಕಾರ್ಮಿಕ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಗುಳುಂ ಆಗಿರುವ ಆರೋಪ ಕೇಳಿ ಬಂದಿದ್ದು. ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ ತನಿಖೆಗೆ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರಕಾರ್ಮಿಕರು ಇದ್ದಾರೆ. ಆದರೆ, ಈ ಪೌರಕಾರ್ಮಿಕರ ಇ.ಎಸ್.ಐ ಮತ್ತು ಪಿ.ಎಫ್ನಲ್ಲೂ ಹಣ ಲೂಟಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಹೆಸರಿನಲ್ಲಿ ನೂರಾರು ಕೋಟಿ ಅಕ್ರಮವಾಗಿರುವ ಆರೋಪ ಕೇಳಿ ಬಂದಿದೆ. ಇದರ ತನಿಖೆಯನ್ನು ಕರ್ನಾಟಕ ಲೋಕಾಯುಕ್ತ ಪ್ರಾರಂಭಿಸಿದೆ. ಇದಕ್ಕೆ ಸಹಕಾರ ನೀಡುವಂತೆ ಬಿಬಿಎಂಪಿಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಮಿತಿಯನ್ನೂ ರಚಿಸಲಾಗಿದೆ.
ಏನಿದು ಆರೋಪ ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಇ.ಎಸ್.ಐ ಮತ್ತು ಪಿ.ಎಫ್ ಹಣದ ಮೊತ್ತ ಬರೋಬ್ಬರಿ 384.00 ಕೋಟಿ ರೂಪಾಯಿ ಮತ್ತು 6,600 ನಕಲಿ ಪೌರಕಾರ್ಮಿಕರ ಹೆಸರಿನಲ್ಲಿ ಬರೋಬ್ಬರಿ 550.00 ಕೋಟಿ ರೂಪಾಯಿಗಳ ವೇತನ ವಂಚನೆ ಆಗಿದೆ ಎನ್ನುವ ಬೃಹತ್ ಹಗರಣದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಮೊಕದ್ದಮೆಯ ತನಿಖಾಧಿಕಾರಿಗಳಿಗೆ ಬಿ.ಬಿ.ಎಂ.ಪಿಯ ದಾಖಲೆಯ ಪರಿಶೀಲನೆಗೆ ಸಹಕರಿಸುವ ಸಂಬಂಧಿಸಿದಂತೆ ತಾಂತ್ರಿಕ ತಂಡವನ್ನು ರಚಿಸಲಾಗಿದೆ. ತಾಂತ್ರಿಕ ತಂಡದ ರಚನೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಪ್ರಕರಣ ವಿಷಯ ಬಹಿರಂಗವಾಗಿದೆ.
ಬಿಬಿಎಂಪಿ ರಚಿಸಿದ ತಾಂತ್ರಿಕ ತಂಡದ ವಿವರ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಆರು ಜನ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ. ಈ ತಾಂತ್ರಿಕ ತಂಡದಲ್ಲಿ ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ – ಮುಖ್ಯ ಅಧ್ಯಕ್ಷರಾಗಿದ್ದಾರೆ. ಅಧಿಕಾರಿಗಳಾದ ಉದಯ್ ಚೌಗುಲೆ, ಅಬ್ದುರಾಜ್ ಎಂ.ಶಿವಶಂಕರ್, ಕದರಣ್ಣ ಹಾಗೂ ಕಾಶಿನಾಥ್ ಇದ್ದಾರೆ. ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ತಾಂತ್ರಿಕ ತಂಡವು ಬಿಬಿಎಂಪಿಯಲ್ಲಿನ ಸಂಬಂಧಿತ ದಾಖಲೆಗಳನ್ನು ಕರ್ನಾಟಕ ಲೋಕಾಯುಕ್ತದ ತನಿಖಾಧಿಕಾರಿಯವರಿಗೆ ಶೀಘ್ರವಾಗಿ ಒದಗಿಸಲು ಹಾಗೂ ತನಿಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಈ ಸಂಬಂಧ ಬಿಬಿಎಂಪಿಯ ಆರೋಗ್ಯ ಹಾಗೂ ನೈರ್ಮಲೀಕರಣದ ವಿಶೇಷ ಆಯುಕ್ತ ಸುರಾಳ್ಕರ್ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.


