BBMP
Loading ...

ಬೆಂಗಳೂರು: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಆಯೋಜಿಸುವ ಕುಂದಾಪ್ರ ಕನ್ನಡ ಹಬ್ಬಕ್ಕೆ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನ ಸಜ್ಜಾಗಿದೆ. ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಈ ಬಾರಿ ವಿಶ್ವ ಕುಂದಾಪ್ರ ಕನ್ನಡ ದಿನ ನಡೆಯಲಿದೆ. ಇದೇ ಮೊದಲ ಬಾರಿಗೆ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಕುಂದಾಪ್ರ ಕನ್ನಡ ಹಬ್ಬ ನಡೆಯುತ್ತಿರುವುದು ವಿಶೇಷ. ಈ ಬಾರಿ ಕುಂದಾಪ್ರ ಹಬ್ಬವನ್ನು ಉದ್ಘಾಟಿಸುವವರು ಯಾರು, ಅತಿಥಿಗಳು ಯಾರು, ಯಾವೆಲ್ಲಾ ನಟ-ನಟಿಯರು ಭಾಗವಹಿಸಲಿದ್ದಾರೆ, ಏನೆಲ್ಲಾ ಕಾರ್ಯಕ್ರಮಗಳು ಇರಲಿವೆ ಎಂಬಿತ್ಯಾದಿ ವಿವರ ಇಲ್ಲಿದೆ.

ಈ ಬಾರಿ ಕುಂದಾಪ್ರ ಕನ್ನಡ ಹಬ್ಬವನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗಸ್ಟ್‌ 17ರಂದು ಸಂಜೆ 5ಕ್ಕೆ ಉದ್ಘಾಟಿಸಲಿದ್ದಾರೆ. ಬೆಂಗಳೂರು ಅರಮನೆ ಮೈದಾನದ ಗೇಟ್‌ ನಂಬರ್‌ 3ರ ವೈಟ್‌ ಪೆಟಲ್ಸ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್‌ 17ರ ಶನಿವಾರ ನಟ ರಿಷಬ್‌ ಶೆಟ್ಟಿ ಅವರಿಗೆ ಊರ ಗೌರವದ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ ಭಾಗವಹಿಸಲಿದ್ದಾರೆ.

ಹೀಗಿದೆ ಪಾರ್ಕಿಂಗ್‌ ವ್ಯವಸ್ಥೆ
ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ. ಹೀಗಾಗಿ ಈ ಹಬ್ಬಕ್ಕೆ ನಾವು ಎಲ್ಲರನ್ನೂ ಆಹ್ವಾನಿಸುತ್ತಿದ್ದು, ಎರಡು ದಿನಗಳ ಹಬ್ಬ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಒಂದು ಸಾವಿರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಅದಾಗ್ಯೂ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸುವುದು ಉತ್ತಮ. ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 10.30 ಮತ್ತು ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 10.30ರ ವರೆಗೆ ನಿರಂತರ ಕಾರ್ಯಕ್ರಮಗಳಿದ್ದು, ಈ ಹಬ್ಬಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ದೀಪಕ್ ಶೆಟ್ಟಿ ವಿವರಣೆ ನೀಡಿದ್ದಾರೆ.

ಕುಂದಾಪ್ರ ಕನ್ನಡ ಹಬ್ಬಕ್ಕೆ ರಂಗು ತುಂಬಲಿರುವ ತಾರೆಯರು
ಕುಂದಾಪುರ ಕನ್ನಡ ಹಬ್ಬದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ಶಿವರಾಜ್‌ಕುಮಾರ್‌, ಉಪೇಂದ್ರ ಮೊದಲಾದ ಸಿನಿತಾರೆಯರು ಭಾಗವಹಿಸಲಿದ್ದು, ಕಾರ್ಯಕ್ರಮದ ರಂಗು ಹೆಚ್ಚಿಸಲಿದ್ದಾರೆ.

ಇತಿಹಾಸದಲ್ಲೇ ಪ್ರಥಮ ಬಾರಿ ಬೆಂಗಳೂರಲ್ಲಿ ಜೋಡಾಟ
ಕುಂದಾಪ್ರ ಕನ್ನಡ ಹಬ್ಬವು ಕುಂದಾಪುರದ ಸಂಸ್ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ. ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ ಜೋಡಾಟ ಯಕ್ಷಗಾನ ನಡೆಯಲಿದೆ. ಇತಿಹಾಸದಲ್ಲೇ ಪ್ರಮುಖ ಬಾರಿಗೆ ಬೆಂಗಳೂರಿನಲ್ಲಿ ಜೋಡಾಟ ನಡೆಯುತ್ತಿದೆ. ಒಂದೇ ಪ್ರಸಂಗ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಸ್ಪರ್ಧೆಯ ಮೇಲೆ ನಡೆಯುವ ಈ ಪ್ರದರ್ಶನವನ್ನು ನೋಡಲು ಊರಿನಿಂದಲೇ 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ ಭಾನುವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಂದ ʼರವಿ ಬಸ್ರೂರ್ ನೈಟ್ಸ್ʼ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ. ಇದು ಕೂಡ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾಹಿತಿ ನೀಡಿದ್ದಾರೆ.

ಆಹಾರ ಮೇಳವೂ ಇರಲಿದೆ
ʼಹೊಟ್ಟಿ ಕಂಡದ್ದ್ ನಾವೇ ಸೈʼ ಎಂಬ ಹೆಸರಿನಲ್ಲಿ ಕರಾವಳಿ ಖಾದ್ಯಮೇಳ ಇರಲಿದ್ದು, ವಿಶೇಷ ತಿಂಡಿ-ತಿನಿಸುಗಳು ಲಭ್ಯ ಇರಲಿವೆ. ಅಲ್ಲದೆ ಕಡಲೂರಿನ ವಸ್ತು, ಒಡವೆ, ವಸ್ತ್ರಪ್ರದರ್ಶನ ಮತ್ತು ಮಾರಾಟದ ʼಕುಂದಾಪ್ರ ಸಂತಿʼ ಕೂಡ ಹಬ್ಬದ ಭಾಗವಾಗಿರುವುದು ವಿಶೇಷ.

ಕಾರ್ಯಕ್ರಮದ ಸಂಪೂರ್ಣ ಡೀಟೈಲ್ಸ್‌
ಶನಿವಾರ ಏನೇನಿರುತ್ತೆ?
* ಮಧ್ಯಾಹ್ನ 3: ದಿಬ್ಬಣ- ನಗರದ ವಿವಿಧ ಭಾಗಗಳಿಂದ ಆಗಮಿಸುವ ಜನರ ಪುರ ಮೆರವಣಿಗೆ.
* ಸಂಜೆ 4: ನಾಕ್ ಘನಾ ಸುರ್ಲ್- ಮಂಗಳೂರಿನ ಜರ್ನಿ ಥೇಟರ್ ಗ್ರೂಪ್‌ನಿಂದ ಜಾನಪದ, ರಂಗ ಹಾಗೂ ಕುಂದಾಪ್ರ ಕನ್ನಡ ಗೀತಗಾಯನ.
* ಸಂಜೆ 6.30: ಜೋಡಾಟ- ಕರಾವಳಿ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರ ಮೇಳೈಸುವಿಕೆ.

ಭಾನುವಾರದ ಹಬ್ಬದಲ್ಲಿ ಇದೆಲ್ಲಾ ಇರುತ್ತೆ
* ಬೆಳಗ್ಗೆ 10: ಬಯಲಾಟ- ಗ್ರಾಮೀಣ ಉತ್ಸವ
* ಬೆಳಗ್ಗೆ 10: ತಾರೆಯರ ಜೊತೆ ಮಾತುಕತೆ, ಕವಿತೆ.
* ಬೆಳಗ್ಗೆ 11: ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼ
* ಬೆಳಗ್ಗೆ 11.15: ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.
* ಮಧ್ಯಾಹ್ನ 12: ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ.
* ಮಧ್ಯಾಹ್ನ 1.30: ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼ
* ಮಧ್ಯಾಹ್ನ 2.30: ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼ
* ಸಂಜೆ 4.30: ರಥೋತ್ಸವ
* ರಾತ್ರಿ 7.30: ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ.

ಸಮಾರೋಪ ಸಮಾರಂಭ
ಆಗಸ್ಟ್‌ 18ರ ಭಾನುವಾರ ಸಂಜೆ 5ಗಂಟೆಗೆ ನಡೆಯಲಿರುವ ಸಮಾರೋಪ ಸಮಾಂಭದಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ. ಮಾಲತಿ ಕೆ. ಹೊಳ್ಳ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಅಂದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಗ್ರೂಪ್‌ನ ಉಪೇಂದ್ರ ಶೆಟ್ಟಿ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಸೌತ್‌ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ ಇರಲಿದ್ದಾರೆ.

ತುಂಗಭದ್ರಾ ಜಲಾಶಯದ ಮೊದಲ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿ! ಅಪಾರ ಪ್ರಮಾಣದ ನೀರು ಉಳಿಕೆ!

Leave a Reply

Your email address will not be published. Required fields are marked *