BBMP
Loading ...

Darshan

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 45 ದಿನಗಳಿಂದ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಆದರೆ ದರ್ಶನ್ ಭೇಟಿ ವಿಚಾರದಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಈ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದಾರೆ.

ಆರೋಪಿ ದರ್ಶನ್ ಭೇಟಿಗೆ ಹತ್ತಿರದ ಸಂಬಂಧಿಗೆ ಮಾತ್ರ ಕಾನೂನಿನಡಿ ಅವಕಾಶ ಇರುತ್ತದೆ. ಆದರೆ ದರ್ಶನ್ ಒಬ್ಬ ಸೆಲೆಬ್ರಿಟಿ ಆಗಿದ್ದರಿಂದ ಅವರ ಭೇಟಿಗೆ ಹಲವಾರು ಜನರಿಗೆ ಜೈಲಾಧಿಕಾರಿಗಳು ಅವಕಾಶ ನೀಡಿದ್ದಾರೆ ಎಂದು ದೂರಲಾಗಿದೆ. ಈವರೆಗೆ ಸ್ನೇಹಿತರು, ಆಪ್ತರು ಎಂದು ಹೇಳಿಕೊಂಡು ಜೈಲಿಗೆ ಬಂದವರಿಗೆಲ್ಲಾ ಜೈಲಾಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿದ್ದಾರೆ. ಈ ಮೂಲಕ ಜೈಲು ನಿಯಮವನ್ನು ಗಾಳಿಗೆ ತೂರಲಾಗಿದೆ. ಅಲ್ಲದೆ ಕೆಲ ನಕಲಿ ದಾಖಲೆಗಳನ್ನೂ ಸೃಷ್ಟಿ ಮಾಡಿದ್ದಾರೆ ಎಂದು ಜೈಲಾಧಿಕಾರಿಗಳ ವಿರುದ್ಧ ನರಸಿಂಹಮೂರ್ತಿ ಆರೋಪಿಸಿದ್ದಾರೆ.

ನರಸಿಂಹಮೂರ್ತಿ ಆರೋಪವೇನು?
ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕಳೆದ ಕೆಲ ದಿನಗಳ ಹಿಂದೆ ದರ್ಶನ್ ಅವರನ್ನು ಭೇಟಿ ಮಾಡಿದವರ ಪಟ್ಟಿ, ಸಮಯ, ದಿನಾಂಕ, ದರ್ಶನ್ ಅವರೊಂದಿಗೆ ಇರುವ ಸಂಬಂಧದ ಬಗ್ಗೆ ಮಾಹಿತಿಯನ್ನು ಕೋರಿದ್ದರು. ಅದರ ಮಾಹಿತಿ ಸದ್ಯ ಲಭ್ಯವಾಗಿದ್ದು, ಎಲ್ಲವೂ ಅನುಮಾನ ಹುಟ್ಟಿಸುವಂತಿದೆ ಎಂದು ಅವರು ಹೇಳಿದ್ದಾರೆ.

ದರ್ಶನ್ ಅವರನ್ನು ಅವರ ಪತ್ನಿ, ಸಹೋದರ, ಪುತ್ರ ಮಾತ್ರವಲ್ಲದೇ ಹಲವಾರು ಜನ ಭೇಟಿ ಮಾಡಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಿದವರ ಪಟ್ಟಿಯಲ್ಲಿ ನಟರೂ ಕೂಡ ಸೇರಿದ್ದಾರೆ. 45 ದಿನಗಳಲ್ಲಿ 30 ಜನ ಜೈಲಿಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ದಾಖಲೆಗಳೊಂದಿಗೆ ನರಸಿಂಹ ಮೂರ್ತಿ ಹಂಚಿಕೊಂಡಿದ್ದಾರೆ.

ವಿಸಿಟರ್ಸ್ ಡೈರಿಯಲ್ಲಿ ಸಾಧು ಕೋಕಿಲ, ಸಮತಾ, ರಕ್ಷಿತಾ ಹೀಗೆ ಹಲವಾರು ಜನ ಜೈಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಮೂರ್ತಿ, ‘ನಾನು ಆರ್‌ಟಿಐ ಸಲ್ಲಿಕೆ ಮಾಡಿದ್ದೆ. ದರ್ಶನ್ ಅವರನ್ನು ಯಾರು ಎಷ್ಟೊತ್ತಿಗೆ? ಎಷ್ಟು ಹೊತ್ತು? ಭೇಟಿ ಮಾಡಿದರು ಎನ್ನುವ ಪ್ರಶ್ನೆಗಳನ್ನು ಕೇಳಿದ್ದೆ. ಆದರೆ ಅದ್ಯಾವುದಕ್ಕೂ ಸರಿಯಾದ ಉತ್ತರ ಇಲ್ಲ’ ಎಂದು ನರಸಿಂಹಮೂರ್ತಿ ಅವರು ಆರೋಪ ಮಾಡಿದ್ದಾರೆ.

ಸಮತಾ ಭೇಟಿ ಬಗ್ಗೆ ವಿಸಿಟರ್ಸ್ ಡೈರಿಯಲ್ಲಿ ಏನಿದೆ?
‘ಸಮತಾ ಅಂತ ಒಬ್ಬ ಮಹಿಳೆ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ಅವರು ಭೇಟಿ ವೇಳೆ ಸಹೋದರಿ ಎಂದು ಡೈರಿಯಲ್ಲಿ ನಮೋದಿಸಿದ್ದಾರೆ. ಆದರೆ ದರ್ಶನ್ ಅವರಿಗೆ ಸಮತಾ ಅನ್ನೋ ಸಹೋದರಿ ಇಲ್ಲ. ಅಲ್ಲದೆ ನಾನು ಅವರ ಭೇಟಿಯಾದ ಸಮಯವನ್ನು ಕೋರಿದ್ದೆ. ಆದರೆ ಅದಕ್ಕೆ ಸರಿಯಾಗಿ ಉತ್ತರವನ್ನು ನೀಡಿಲ್ಲ” ಎಂದಿದ್ದಾರೆ.

ನಕಲಿ ದಾಖಲೆ ಸೃಷ್ಟಿ..!
ಅಲ್ಲದೆ ಜೈಲಾಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ. ಅಲ್ಲದೇ ವಿಸಿಟರ್ಸ್ ಡೈರಿ ಅಂದರೆ, ಯಾರು ವಿಸಿಟ್ ಮಾಡಿ ಇರ್ತಾರೋ ಅವರೇ ಆ ಡೈರಿಯಲ್ಲಿ ತಮ್ಮ ಬಗ್ಗೆ ಮಾಹಿತಿ ಬರೆದಿರಬೇಕು. ಆದರೆ ಈ ಡೈರಿಯನ್ನು ಯಾರೋ ಒಬ್ಬರೇ ಕುಳಿತು ಬರೆದಿದ್ದಾರೆ. ಸಂಬಂಧಿಕರಿಗೆ ಮಾತ್ರ ಅದರಲ್ಲೂ ಒಡಹುಟ್ಟಿದವರಿಗೆ ಮಾತ್ರ ಜೈಲಿಗೆ ಭೇಟಿ ನೀಡಿ ಕೈದಿ ಭೇಟಿಗೆ ಅವಕಾಶ ಇರುತ್ತದೆ.

ಆದರೆ ಇಲ್ಲಿ ಸ್ನೇಹಿತರು, ಆಪ್ತರು ಭೇಟಿಯಾಗಿದ್ದಾರೆ. ಅವರು ಭೇಟಿಯ ವಿವರವನ್ನು ಜೈಲಾಧಿಕಾರಿಗಳೇ ಡೈರಿಯಲ್ಲಿ ಬರೆದಿದ್ದಾರೆ. ಜೈಲಾಧಿಕಾರಿಗಳು ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ತಪ್ಪು ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ’ ಎಂದು ನರಸಿಂಹಮೂರ್ತಿ ಆರೋಪಿಸಿದ್ದಾರೆ. ಜೈಲಾಧಿಕಾರಿಗಳು ಅಕ್ರಮವಾಗಿ ಎಲ್ಲರಿಗೂ ದರ್ಶನ್ ಭೇಟಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ದರ್ಶನ್‌ಗೆ ಕಂಠಕ ಶುರುವಾಯ್ತಾ?
ಆರ್‌ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕೇಳಿದ ಪ್ರಶ್ನೆಗಳಿಗೆ ಯಾವುದಕ್ಕೂ ಜೈಲಿನಿಂದ ಯಾವುದೇ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಕೂಡ ಜೈಲಾಧಿಕಾರಿಗಳು ನೀಡಿಲ್ಲ. ಇದರಿಂದಾಗಿ ಜೈಲಾಧಿಕಾರಿಗಳು ಜೈಲಿನ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಈಗಾಗಲೇ ಹೊರಬರಲು ಕಷ್ಟಪಡುತ್ತಿದ್ದಾರೆ. ಅವರಿಗೆ ಹೊರಗಿನಿಂದ ಬರುವ ವ್ಯಕ್ತಿಗಳಿಗೆ ಭೇಟಿ ನೀಡಲು ಅವಕಾಶ ನೀಡಲು ಜೈಲಾಧಿಕಾರಿಗಳು ಜೈಲು ರೂಲ್ಸ್ ಬ್ರೇಕ್ ಮಾಡಿರುವಾಗ, ಒಳಗಡೆ ಯಾವೆಲ್ಲಾ ವ್ಯವಸ್ಥೆ ಇರಬಹುದು ಎನ್ನುವ ಅನುಮಾನ ಈಗ ಶುರುವಾಗಿದೆ. ಒಂದು ವೇಳೆ ಈ ಪ್ರಶ್ನೆ ಗಂಭೀರವಾದರೆ ದರ್ಶನ್ ಜೈಲುವಾಸ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

Leave a Reply

Your email address will not be published. Required fields are marked *