ಬೆಂಗಳೂರು: ಬ್ಯಾಟರಾಯನಪುರ ಬಳಿಯ ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ ಕಂಪ್ಯೂಟರ್, ಕೆಲ ದಾಖಲೆಗಳು ಸುಟ್ಟು ಭಸ್ಮವಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಇಂದು (ಶುಕ್ರವಾರ) ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಕಳೆದ ವರ್ಷ 2023 ಆಗಸ್ಟ್ 11 ರಂದು ಬಿಬಿಎಂಪಿ ಮುಖ್ಯ ಕಚೇರಿಯ ಬಿಬಿಎಂಪಿ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಬರೋಬ್ಬರಿ 9 ಮಂದಿ ಗಾಯಗೊಂಡಿದ್ದರು. ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಮಂದಿಯನ್ನು ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದೀಗ ಮತ್ತೊಂದು ಬೆಂಕಿ ಅನಾಹುತ ನಡೆದಿದೆ.
ಅಂದು ಘಟನೆ ನಡೆದ ಕಟ್ಟಡದಲ್ಲಿಯೇ ಬಿಬಿಎಂಪಿಯ ಮಹತ್ವದ ದಾಖಲೆಗಳಿದ್ದ ರೆಕಾರ್ಡ್ಸ್ ರೂಮ್ ಇತ್ತು. ಅದೃಷ್ಟವಶಾತ್ ಆ ರೂಮ್ಗೆ ಯಾವುದೇ ಹಾನಿ ಆಗಿರಲಿಲ್ಲ. ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ‘ಬೆಂಜೀನ್ ಎನ್ನುವ ಕೆಮಿಕಲ್ ಸ್ಫೋಟವಾಗಿರುವುದು ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಈ ಕೆಮಿನಲ್ನ್ನು ಬಿಟುಮಿನ್ ಟೆಸ್ಟ್ಗೆ ಬಳಸಲಾಗುತ್ತದೆ ಎಂದು ಹೇಳಿದ್ದರು. ಈ ಘಟನೆ ನಡೆದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಕಛೇರಿಯಲ್ಲಿ ಇದೀಗ ಮತ್ತೊಂದು ಅವಘಡ ನಡೆದಿದೆ.


