Greater Bengaluru News9: ಕರ್ನಾಟಕದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಭಾಸ್ಕರ್ ರಾವ್ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಅವರು ಮಾಡಿದ ಪೋಸ್ಟ್ ರಾಜ್ಯ ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂ. ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧಗಳಲ್ಲಿ ಪೊಲೀಸರೇ ಭಾಗಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಬೆಳವಣಿಗೆಗಳ ನಡುವೆಯೇ ಭಾಸ್ಕರ್ ರಾವ್ ಅವರ ಆರೋಪಗಳು ಹೆಚ್ಚಿನ ಮಹತ್ವ ಪಡೆದಿವೆ.
ತಮ್ಮ ಪೋಸ್ಟ್ನಲ್ಲಿ ಭಾಸ್ಕರ್ ರಾವ್, ಕರ್ನಾಟಕ ರಾಜ್ಯದ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿಯಿದ್ದು, ಅನೇಕ ಅರ್ಹ ಅಧಿಕಾರಿಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಒಂದು ಪೊಲೀಸ್ ಠಾಣೆಯ ಖಾಲಿ ಹುದ್ದೆಗೆ 55 ಲಕ್ಷ ರೂ. ಲಂಚ ಬೇಡಿಕೆ ಇಡಲಾಗಿತ್ತು. ಆ ಮೊತ್ತವನ್ನು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಅಭ್ಯರ್ಥಿಗೆ ಅವಕಾಶ ಕೈ ತಪ್ಪಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಪರ್ಯಾಯವಾಗಿ ಮಧ್ಯವರ್ತಿಯ ಮೂಲಕ ಕಚೇರಿ ಹುದ್ದೆ ನೀಡುವ ಪ್ರಸ್ತಾಪವಿದ್ದು, ಮೊದಲಿಗೆ 3 ಲಕ್ಷ ರೂ. ಕೇಳಲಾಗಿತ್ತು. ನಂತರ 1 ಲಕ್ಷ ರೂ.ಗೆ ವ್ಯವಹಾರ ಅಂತಿಮಗೊಂಡಿತು. ಇದೇ ಇಂದಿನ ವ್ಯವಸ್ಥೆಯ ಸ್ಥಿತಿ ಎಂದು ಅವರು ಕಿಡಿಕಾರಿದ್ದಾರೆ.
ಪ್ರಭಾವಿ ವ್ಯಕ್ತಿಗಳ ಮಕ್ಕಳಿಗೆ ಮಾತ್ರ ತ್ವರಿತವಾಗಿ ನೇಮಕಾತಿ ಆಗುತ್ತಿದೆ ಎಂಬ ಆರೋಪ ಮಾಡಿರುವ ಭಾಸ್ಕರ್ ರಾವ್, ಗೃಹ ಸಚಿವರು ಪ್ರಾಮಾಣಿಕರಾಗಿದ್ದು, ಮೇಲಿಂದ ಆದೇಶ ಬಂದಾಗ ಸಹಿ ಮಾಡುವುದರ ಹೊರತು ಹೆಚ್ಚಿನ ಮಾಹಿತಿ ಅವರಿಗೆ ಇಲ್ಲ ಎಂಬ ವ್ಯಂಗ್ಯವನ್ನೂ ತಮ್ಮ ಪೋಸ್ಟ್ನಲ್ಲಿ ವ್ಯಕ್ತಪಡಿಸಿದ್ದಾರೆ.


