BBMP
Loading ...

BBMP

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ವಿಧಾನಮಂಡಲ ಅಂಗೀಕರಿಸಿದ ಬೆನ್ನಲ್ಲೇ, ಹೊಸದಾಗಿ ರಚಿಸಿರುವ 5 ಪಾಲಿಕೆಗಳ ಕಚೇರಿಗಳು ಸೆ.2ರಿಂದ ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದರಿಂದಾಗಿ ಬಿಬಿಎಂಪಿ ಪೂರ್ಣ ಪ್ರಮಾಣದಲ್ಲಿ ತೆರೆಮರೆಗೆ ಸರಿಯಲಿದ್ದು, ಜಿಬಿಎ ಆಡಳಿತಕ್ಕೆ ವೇದಿಕೆ ಕಲ್ಪಿಸಿದೆ.

ಕಳೆದ ತಿಂಗಳು ಐದು ಹೊಸ ಪಾಲಿಕೆ ರಚನೆ ಸಂಬಂಧ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಈ ತಿಂಗಳ 18ರವರೆಗೆ ಕಾಲಾವಕಾಶ ನೀಡಲಾಗಿತ್ತು. ಸಾರ್ವಜನಿಕರಿಂದ ಕಡಿಮೆ ಸಂಖ್ಯೆಯ ಆಕ್ಷೇಪ ದಾಖಲಾಗಿದ್ದು, ಅವುಗಳನ್ನು ಪರಿಶೀಲಿಸುವ ಕೆಲಸ ಪೂರ್ಣಗೊಳಿಸಿ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಇದನ್ನಾಧರಿಸಿ ಸರ್ಕಾರ ಈ ತಿಂಗಳಾಂತ್ಯಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಇದು ಹೊಸ ಪಾಲಿಕೆಗಳು ಅಧಿಕೃತವಾಗಿ ಸ್ಥಾಪನೆಯಾಗಲು ವೇದಿಕೆ ಕಲ್ಪಿಸಲಿದ್ದು, ಹೊಸ ಸ್ಥಳಗಳಲ್ಲಿ ಕಚೇರಿಗಳು ಕಾರ್ಯಾರಂಭ ಮಾಡಲಿವೆ.

ಹೊಸ ಆಯುಕ್ತರ ನೇಮಕ
ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಪಾಲಿಕೆಗಳು ಅಸ್ತಿತ್ವಕ್ಕೆ ಬರುವುದರಿಂದ ಅವುಗಳಿಗೆ ಹೊಸದಾಗಿ ಆಯುಕ್ತರನ್ನು ನೇಮಿಸಲಾಗುತ್ತದೆ. ಹಾಲಿ ಬಿಬಿಎಂಪಿಯಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿಗಳ ಪೈಕಿ ಹಿರಿತನ ಆಧರಿಸಿ ನೇಮಕ ಮಾಡಲಾಗುತ್ತದೆ. ಜತೆಗೆ ಜಂಟಿ ಆಯುಕ್ತರನ್ನೂ ನಿಯೋಜನೆಗೊಳ್ಳಲಿದ್ದಾರೆ. ಈ ಅಧಿಕಾರಿಗಳು ಹೊಸ ಪಾಲಿಕೆಗಳ ಆಡಳಿತವನ್ನು ವಹಿಸಲಿದ್ದು, ದೈನಂದಿನ ಕಾರ್ಯವನ್ನು ನಿಭಾಯಿಸಲಿದ್ದಾರೆ.

ಎ ಹಾಗೂ ಬಿ ವರ್ಗದ ಅಧಿಕಾರಿಗಳನ್ನು ನಗರಾಭಿವೃಧ್ಧಿ ಇಲಾಖೆ ನೇಮಿಸಲಿದೆ. ಸಿ ಹಾಗೂ ಡಿ ವರ್ಗದ ನೌಕರರನ್ನು ಆಯಾ ಪಾಲಿಕೆಯ ಆಯುಕ್ತರು ನಿಯೋಜಿಸಲಿದ್ದಾರೆ. ಹಾಲಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಆಯಾ ವಲಯಗಳು ಯಾವ ಪಾಲಿಕೆಗೆ ಸೇರ್ಪಡೆಯಾಗಲಿದೆಯೋ ಅದೇ ವ್ಯಾಪ್ತಿಯಲ್ಲಿ ನಿಯೋಜನೆಗೊಳ್ಳಲಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಇದ್ದಲ್ಲಿ ಅಂತಹವರನ್ನು ಜಿಬಿಎ ಮುಖ್ಯ ಆಯುಕ್ತರ ಅನುಮತಿ ಪಡೆದು ನಿಯೋಜನೆ ಮಾಡಲಾಗುತ್ತದೆ.

10 ವಲಯಗಳ ರಚನೆ
ಹೊಸದಾಗಿ ರಚನೆಯಾಗಿರುವ ಐದೂ ಪಾಲಿಕೆಗಳಲ್ಲಿ ಆಡಳಿತವನ್ನು ಸುಗಮವಾಗಿ ನಡೆಸಲು ತಲಾ ಎರಡು ವಲಯಗಳನ್ನು ರಚಿಸಲಾಗುತ್ತದೆ. ಈ ಹತ್ತೂ ವಲಯಗಳು ಹಿಂದಿನ ಬಿಬಿಎಂಪಿ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ದೊಡ್ಡ ಪಾಲಿಕೆಗಳಾಗಿರುವ ಪಶ್ಚಿಮ ಹಾಗೂ ಪೂರ್ವ ಪಾಲಿಕೆಗಳಲ್ಲಿ ವಲಯಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಬಗ್ಗೆ ಪ್ರಸ್ತಾಪ ಇದ್ದು, ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಹೊಸ ಕಚೇರಿಗಳ ಎಲ್ಲೆಲ್ಲಿ?
ಉತ್ತರ ಪಾಲಿಕೆ – ಯಲಹಂಕ ತಾಲೂಕು ಕಚೇರಿ ಅನೆಕ್ಸ್ ಬಿಲ್ಡಿಂಗ್
ದಕ್ಷಿಣ ಪಾಲಿಕೆ – ಜಯನಗರದ ದಕ್ಷಿಣ ವಲಯ ಕಚೇರಿ
ಪೂರ್ವ ಪಾಲಿಕೆ – ಎಂ.ಜಿ. ರಸ್ತೆಯ ಯುಟಿಲಿಟಿ ಬಿಲ್ಡಿಂಗ್
ಪಶ್ಚಿಮ ಪಾಲಿಕೆ – ಗೋವಿಂದರಾಜನಗರದ ಕನಕ ಭವನ
ಕೇಂದ್ರ ಪಾಲಕೆ – ಬಿಬಿಎಂಪಿ ಕೇಂದ್ರ ಕಚೇರಿಯ ಅನೆಕ್ಸ್ ಬಿಲ್ಡಿಂಗ್

ಸಿಎಂ, ಡಿಸಿಎಂಗೆ ಪ್ರತ್ಯೇಕ ಕಚೇರಿ
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಧ್ಯಕ್ಷ, ಉಪಾಧ್ಯಕ್ಷರಾಗಿರುವ ಸಿಎಂ ಮತ್ತು ಡಿಸಿಎಂಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಆಫೀಸ್ ಮೀಸಲಿಡಲಾಗುತ್ತದೆ. ಸದ್ಯ ಬಿಬಿಎಂಪಿಯಲ್ಲಿರುವ ಮೇಯರ್ ಕಚೇರಿಯನ್ನು ಜಿಬಿಎ ಅಧ್ಯಕ್ಷ, ಉಪ ಮೇಯರ್ ಕಚೇರಿಯನ್ನು ಉಪಾಧ್ಯಕ್ಷರಿಗೆ ಹಂಚಿಕೆ ಮಾಡಲಿದ್ದು, ಈ ಆಫೀಸ್ ಅನ್ನು ನವೀಕರಿಸಲಾಗುತ್ತದೆ. ಜಿಬಿಎ ಮುಖ್ಯ ಆಯುಕ್ತರು ಹಾಲಿ ನಿರ್ವಹಿಸುತ್ತಿರುವ ಆಫಿಸನ್ನೇ ಬಳಕೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *