Greater Bengaluru News : ನಾಳೆ (ಮಾ.28) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ನ ಮೊದಲನೇ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ನಮಗೂ ಮತ್ತು ನಮ್ಮ ಕುಟುಂಬಕ್ಕೆ 4 ಟಿಕೆಟ್ ಕೊಡಿ ಎಂಬ ಶಾಸಕರ ಡಿಮಾಂಡ್ ನಿನ್ನೆ ವಿಧಾನಸಭೆಯಲ್ಲೂ ದೊಡ್ಡ ಚರ್ಚೆಗೆ ಗುರಿಯಾಯಿತು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮುಂದಿಟ್ಟ ಬೇಡಿಕೆಯನ್ನು ಕಡೆಗೂ ರಾಜ್ಯ ಸರ್ಕಾರ ಈಡೇರಿಸಿದೆ. ಸದ್ಯ ಇದು ಟಿಕೆಟ್ಗಾಗಿ ಕ್ಯೂ ನಿಲ್ಲುವ ಜನಸಾಮಾನ್ಯರ ಪಿತ್ತವನ್ನು ನೆತ್ತಿಗೇರಿಸಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶಾಸಕರು, ಸಚಿವರು ಮತ್ತು ಅವರ ಕುಟುಂಬಸ್ಥರಿಗೆ ಪ್ರತ್ಯೇಕ ಟಿಕೆಟ್‌ಗಳನ್ನು ನೀಡಬೇಕು ಎಂದು ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ ಆಗ್ರಹಿಸಿದರು. ಜನಸಾಮಾನ್ಯರ ಜೊತೆ ನಾವೂ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಬೇಕಾ? ನಾವು ವಿಐಪಿಗಳು. ಶಾಸಕರಿಗೆ ಮತ್ತು ಶಾಸಕರ ಕುಟುಂಬಕ್ಕೆ ಒಂದು ಟಿಕೆಟ್ ಅಲ್ಲ ಐದು ಟಿಕೆಟ್ ಕೊಡಬೇಕು. ಇಲ್ಲಿ ಎಂಎಲ್ಎಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಸ್ಪೀಕರ್ಗೆ ಒತ್ತಾಯಿಸಿದರು.
ಶಾಸಕರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಅವರೂ ಸರ್ಕಾರ ಭಾಗ. ಹೀಗಿರುವಾಗ, ಕೇಳುವ ಹಕ್ಕು ಅವರಿಗೂ ಇದೆ. ಶೀಘ್ರವೇ ಕೆಎಸ್‌ಸಿಎ ಅಧ್ಯಕ್ಷರ ಜೊತೆ ಮಾತನಾಡಿ, ಸ್ಟೇಡಿಯಂನಲ್ಲಿ ನಮ್ಮ ಶಾಸಕರಿಗೂ ಟಿಕೆಟ್ ಹಂಚುವ ಬಗ್ಗೆ ಹೇಳ್ತೀನಿ ಎಂದಿದ್ದರು. ಅಂತೆಯೇ, ನಾಳಿನ ಪಂದ್ಯಕ್ಕೆ ಆಹ್ವಾನಿಸಲು ಸಿಎಂರನ್ನು ಭೇಟಿಯಾದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಶಾಸಕರಿಗೂ ಟಿಕೆಟ್ ಹಂಚಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಸದನದಲ್ಲಿ ಐಪಿಎಲ್ ಟಿಕೆಟ್ ಬೇಕೆಂದು ಶಾಸಕರು ಕೇಳಿದ್ದಾರೆ. ಅವರಿಗೂ 4 ಟಿಕೆಟ್ ಕೊಟ್ಟುಬಿಡಿ ಎಂದು ಸಿಎಂ ಹೇಳಿದರು. ಇದಕ್ಕೆ ಒಪ್ಪಿದ ವೆಂಕಟೇಶ್ ಪ್ರಸಾದ್, ನಾಳಿನ ಆರ್ಸಿಬಿ ಮತ್ತು ಎಸ್ಆರ್ಎಚ್ ಪಂದ್ಯದ ಬಹುತೇಕ ಟಿಕೆಟ್ ಬುಕ್ಕಿಂಗ್ ಆಗಿರುವ ಕಾರಣ, 1+1 ಕೊಡ್ತೀವಿ. ಅದು ಮಾ.28ಕ್ಕೆ ಮಾತ್ರ ಅನ್ವಯ. ಇನ್ನುಳಿದ ಪಂದ್ಯಗಳಿಗೆ 4 ಟಿಕೆಟ್ ಅನ್ನೇ ಕೊಡುತ್ತೇವೆ ಎಂದು ಹೇಳಿದರು. ರಾಜ್ಯ ಸರ್ಕಾರದ ಮಾತಿಗೆ ತಲೆದೂಗಿದ ಕೆಎಸ್‌ಸಿಎ ವಿರುದ್ಧ ಸದ್ಯ ಕ್ರಿಕೆಟ್ ಪ್ರಿಯರು ಮತ್ತು ಜನಸಾಮಾನ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.


