Greater Bengaluru News9: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ವಿದ್ಯುತ್ ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಕುರಿತು ಈಗಾಗಲೇ ಎರಡು ಬಾರಿ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ನಗರದ ಪ್ರಮುಖ ರಸ್ತೆಗಳಲ್ಲಿ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸಚಿವರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಆಗಸ್ಟ್ 28ರ ಸಂಜೆ ಸಚಿವ ಕೃಷ್ಣಬೈರೇಗೌಡ ಅವರು ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ ಖುದ್ದಾಗಿ ಬೀದಿ ದೀಪಗಳ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ರಸ್ತೆಯಲ್ಲಿದ್ದ ಒಟ್ಟು 222 ವಿದ್ಯುತ್ ಕಂಬಗಳ ಪೈಕಿ 140 ಕಂಬಗಳಲ್ಲಿನ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.
ಈ ಕುರಿತು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಿಬಿಎ ವ್ಯಾಪ್ತಿಯ ವಿದ್ಯುತ್ ಬೀದಿ ದೀಪಗಳ ನಿರ್ವಹಣೆ ಕುರಿತು ಈಗಾಗಲೇ ಎರಡು ಬಾರಿ ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಆಗಸ್ಟ್ 4ರಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಬೀದಿ ದೀಪಗಳ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಸೂಚಿಸಲಾಗಿತ್ತು. ದೋಷಗಳನ್ನು ಸರಿಪಡಿಸಲು ಅಗತ್ಯ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೂ ಪ್ರಮುಖ ರಸ್ತೆಯಲ್ಲೇ ಹೆಚ್ಚಿನ ಸಂಖ್ಯೆಯ ದೀಪಗಳು ಕಾರ್ಯನಿರ್ವಹಿಸದಿರುವುದು ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಹಡ್ಸನ್ ರಸ್ತೆ ಬೆಂಗಳೂರಿನ ಪ್ರಮುಖ ರಸ್ತೆಯಾಗಿದ್ದು, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರ ಜೊತೆಗೆ ನ್ಯಾಯಾಲಯ ಸಂಕೀರ್ಣ ಹಾಗೂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನಿವಾಸದ ಸಮೀಪದಲ್ಲಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ.
ಈ ಬಗ್ಗೆ ಸಚಿವ ಕೃಷ್ಣಬೈರೇಗೌಡ ಮಾತನಾಡಿ, “ಪ್ರಮುಖ ರಸ್ತೆಯಲ್ಲಿನ ವಿದ್ಯುತ್ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ನಿರ್ವಹಣೆಯಲ್ಲಿ ಲೋಪವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸದೇ ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆ ಸುರಕ್ಷತೆ ಹಾಗೂ ಸಂಚಾರಕ್ಕೆ ತೊಂದರೆಯಾಗದಂತೆ ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಈಗಾಗಲೇ ನೀಡಿರುವ ಸೂಚನೆಗಳನ್ನು ಪಾಲಿಸದ ಅಧಿಕಾರಿಗಳು ಹಾಗೂ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ.


