ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಏಪ್ರಿಲ್ 15) ತೀರ್ಪು ಪ್ರಕಟಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಗಜಾನನ ಭಟ್ ತೀರ್ಪು ಪ್ರಕಟಿಸಿದರು. ಈ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ, ಒಬ್ಬ ಎಸಿಬಿ ಹಾಗೂ ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲಾ 19 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿದ್ದರು. ವಿನಯ್ ಕುಲಕರ್ಣಿ ಸೇರಿದಂತೆ 17 ಆರೋಪಿಗಳನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು. ಅಲ್ಲದೆ, ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸುವಂತೆ ನ್ಯಾಯಾಲಯ ಸೂಚನೆ ನೀಡಿತು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಅಪಾರಾಧಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ನಾಳೆ ಶಿಕ್ಷೆ ಪ್ರಕಟ
ಇಂದು ಅಪರಾಧಿ ಎಂದು ತೀರ್ಪು ಪ್ರಕಟಿಸಿರುವ ನ್ಯಾಯಾಲಯ ನಾಳೆ ಶಿಕ್ಷೆ ಪ್ರಮಾಣದ ವಾದ ಮಂಡನೆಯನ್ನು ಆರಂಭಿಸಲಿದೆ. ಇದು ಮುಗಿದ ಬಳಿಕ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏ್ರಪಿಲ್ 9ರಂದು ತೀರ್ಪು ಪ್ರಕಟಿಸಬೇಕಿತ್ತು. ಆದರೆ, ತಾಂತ್ರಿಕ ಕಾರಣ ಹಾಗೂ ತೀರ್ಪು ಸಿದ್ಧಪಡಿಸುವಲ್ಲಿನ ವಿಳಂಬದಿಂದಾಗಿ ಅಂತಿಮ ತೀರ್ಪು ಪ್ರಕಟ ದಿನಾಂಕವನ್ನು ಏ್ರಪಿಲ್ 15ಕ್ಕೆ ಮುಂದೂಡಿತ್ತು. ಅಂತಿಮವಾಗಿ ಇಂದು ತೀರ್ಪು ಹೊರಬಿದ್ದಿದೆ. ಸುಮಾರು 10 ವರ್ಷಗಳ ಹಿಂದಿನ ಪ್ರಕರಣಕ್ಕೆ ಇಂದು ತೆರೆಬಿದ್ದಿದೆ
ತೀರ್ಪು ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಕೆಎಸ್ಆರ್ಪಿ ತುಕಡಿ ಸೇರಿದಂತೆ ವ್ಯಾಪಕ ಬಂದೋಬಸ್ತ್ ಆಯೋಜಿಸಲಾಗಿತ್ತು. ಅಲ್ಲದೆ, ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ವಿನಯ್ಕುಲಕರ್ಣಿ ಅವರು ತಮ್ಮ ಇಬ್ಬರು ಪುತ್ರಿಯರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದರು.
ಪ್ರಕರಣದ ಹಿನ್ನೆಲೆ ಏನು?
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣವು ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ ಘಟನೆಯಾಗಿದೆ. 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ತಮ್ಮದೇ ಜಿಮ್ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಮುಖ್ಯ ಕಾರಣ ಎಂಬ ಆರೋಪಗಳು ಆರಂಭದಿಂದಲೂ ಕೇಳಿಬಂದಿದ್ದವು.
ಈ ಪ್ರಕರಣದ ಪ್ರಮುಖ ತಿರುವು ಎಂದರೆ ಕಾಂಗ್ರೆಸ್ ಪ್ರಭಾವಿ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಬಿಐ (CBI) ತನಿಖೆಗೆ ವಹಿಸಲಾಯಿತು. ಸಿಬಿಐ ತನಿಖೆಯ ವೇಳೆ ವಿನಯ್ ಕುಲಕರ್ಣಿ ಅವರು ಕೊಲೆಯ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಉಲ್ಲೇಖಿಸಿ, 2020ರಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು ಒಂಬತ್ತು ತಿಂಗಳುಗಳ ಕಾಲ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.
ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯ ಪ್ರಕಾರ, ಯೋಗೀಶ್ ಗೌಡ ಮತ್ತು ವಿನಯ್ ಕುಲಕರ್ಣಿ ನಡುವೆ ಜಮೀನು ವಿಚಾರ ಹಾಗೂ ರಾಜಕೀಯ ಪ್ರಾಬಲ್ಯಕ್ಕೆ ಸಂಬಂಧಿಸಿದಂತೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಇದೇ ದ್ವೇಷದಿಂದಾಗಿ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಲು ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಲ್ಲದೆ ಇನ್ನೂ ಹಲವರು ಆರೋಪಿಗಳಾಗಿ ಗುರುತಿಸಲ್ಪಟ್ಟಿದ್ದಾರೆ.
ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದರು. ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತಾ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು ಎಂಬ ಆರೋಪವಿದೆ. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಸಿಬಿಐ ತನಿಖೆಯ ನಂತರ 2020ರಲ್ಲಿ ಬಂಧನವಾಗಿ ಜೈಲು ಸೇರಿದ ವಿನಯ್ ಕುಲಕರ್ಣಿ ಅವರು, 2021ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಆರೋಪದ ಮೇಲೆ ಸಿಬಿಐ, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದಾದ ಬಳಿಕ 2025ರ ಜೂನ್ 6ರಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಒಂದು ವಾರದೊಳಗೆ ಶರಣಾಗುವಂತೆ ಆದೇಶಿಸಿತು. ಅದರಂತೆ ಜೂನ್ 14ರಂದು ವಿನಯ್ ಕುಲಕರ್ಣಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾದರು. ಈ ವೇಳೆ ಅವರನ್ನು ಸಿಬಿಐ ವಶಕ್ಕೆ ಪಡೆಯಿತು. ಬಳಿಕ ವಿನಯ್ ಕುಲಕರ್ಣಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.
ಜೈಲು ಸೇರಿದ ನಂತರ ವಿನಯ್ ಕುಲಕರ್ಣಿ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, 2026ರ ಜನವರಿ 27ರಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿ, ಸುಪ್ರೀಂ ಕೋರ್ಟ್ನಲ್ಲಿ ಮಾತ್ರ ಮನವಿ ಮಾಡುವಂತೆ ಸೂಚಿಸಿತು. ನಂತರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. 2026ರ ಫೆಬ್ರವರಿ 27ರಂದು ಜಾಮೀನು ಅನುಮೋದನೆಯಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಇದೀಗ ಮತ್ತೆ ಜೈಲು ಸೇರಿದ್ದಾರೆ.


