Greater Bengaluru News9: ಸ್ಯಾಂಡಲ್‌ವುಡ್‌ನ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರ ಇತ್ತೀಚಿನ ನಡೆಗಳು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿ ಸುದ್ದಿಯಾಗಿದ್ದ ರಿಷಬ್, ಈಗ ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನು ಅನ್‌ಫಾಲೋ ಮಾಡುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.
ಸ್ನೇಹದಲ್ಲಿ ಬಿರುಕು ಮೂಡಿತೇ?
ಕಳೆದ ಕೆಲವು ದಿನಗಳಿಂದ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ರಿಷಬ್ ಮೊದಲು ‘ಹೊಂಬಾಳೆ’ ಮತ್ತು ‘ಕಾಂತಾರ’ ಅಧಿಕೃತ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು. ಈಗ ಅಚ್ಚರಿ ಎಂಬಂತೆ, ತಮ್ಮ ಅತ್ಯಾಪ್ತ ಗೆಳೆಯ, ‘ಶೆಟ್ಟಿ ಗ್ಯಾಂಗ್’ನ ಪ್ರಮುಖ ಸದಸ್ಯ ರಾಜ್ ಬಿ. ಶೆಟ್ಟಿ ಮತ್ತು ‘ಕಾಂತಾರ-1’ (ಪ್ರಿಕ್ವೆಲ್) ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ. ಇವರಷ್ಟೇ ಅಲ್ಲದೆ, ಸುಮಾರು 40ಕ್ಕೂ ಹೆಚ್ಚು ಅಕೌಂಟ್‌ಗಳನ್ನು ರಿಷಬ್ ತಮ್ಮ ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ.
ಮನಸ್ತಾಪದ ಗಾಸಿಪ್‌ಗೆ ಸಿಕ್ಕಿತೇ ಬಲ?
ರಿಷಬ್ ಮತ್ತು ರಾಜ್ ಬಿ. ಶೆಟ್ಟಿ ನಡುವೆ ವೈಮನಸ್ಸು ಉಂಟಾಗಿದೆ ಎಂಬ ವದಂತಿಗಳು ಈ ಹಿಂದೆಯೇ ಹರಿದಾಡುತ್ತಿದ್ದವು. ಈ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿದ್ದ ರಾಜ್ ಬಿ. ಶೆಟ್ಟಿ, ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಆದರೆ ರಿಷಬ್ ಅವರ ಈ ಸಡನ್ ಅನ್‌ಫಾಲೋ ನಡೆ ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ರಾಜ್ ಮತ್ತು ರುಕ್ಮಿಣಿ ಇಬ್ಬರೂ ಇಂದಿಗೂ ರಿಷಬ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.
ಯುಗಾದಿ ಹಬ್ಬದಂದು ರಿಷಬ್ ‘2ನೇ ಅಧ್ಯಾಯ ಆರಂಭ’ ಎಂಬ ಪೋಸ್ಟರ್ ಹಂಚಿಕೊಂಡಿದ್ದರು. ಇದು ‘ಕಾಂತಾರ’ ಸರಣಿಯದ್ದೇ ಅಥವಾ ಅವರ ಮೊದಲ ಹಿಟ್ ಚಿತ್ರ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ಯ ಮುಂದುವರಿದ ಭಾಗವೇ ಎಂಬ ಗೊಂದಲ ಅಭಿಮಾನಿಗಳಲ್ಲಿದೆ. ಹೊಂಬಾಳೆ ಬ್ಯಾನರ್ ಬದಲಿಗೆ ರಿಷಬ್ ತಮ್ಮದೇ ಸ್ವಂತ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಘೋಷಿಸಿರುವುದು ಭಿನ್ನಾಭಿಪ್ರಾಯದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ರಿಷಬ್ ಶೆಟ್ಟಿ ಅವರು ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಚಿತ್ರದಲ್ಲಿ ಮಗ್ನರಾಗಿದ್ದಾರೆ. ಅತ್ತ ನಟಿ ರುಕ್ಮಿಣಿ ವಸಂತ್ ಅವರು ಜ್ಯೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಒಟ್ಟಿನಲ್ಲಿ, ‘ಕಾಂತಾರ’ದಂತಹ ಜಾಗತಿಕ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ತಮ್ಮ ಆಪ್ತ ಬಳಗದಿಂದ ದೂರವಾಗುತ್ತಿದ್ದಾರಾ? ಅಥವಾ ಇದು ಕೇವಲ ಅವರ ಸೋಷಿಯಲ್ ಮೀಡಿಯಾ ಟೀಮ್ ಮಾಡುತ್ತಿರುವ ಬದಲಾವಣೆಯೇ? ಅಥವಾ ಯಾವುದಾದರೂ ಹೊಸ ಪ್ರಾಜೆಕ್ಟ್‌ನ ಪ್ರಚಾರ ತಂತ್ರವೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.


