Greater Bengaluru News9: ಬೆಂಗಳೂರಿನ ಸುಮನಹಳ್ಳಿ ವ್ಯಾಪ್ತಿಯಲ್ಲಿ ಭೀಕರ ಅಗ್ನಿ ಅನಾಹುತವೊಂದು (Fire Accident) ಸಂಭವಿಸಿದೆ. ಇಲ್ಲಿನ ಗೊಲ್ಲರಹಟ್ಟಿ ಸಮೀಪದ ಪೇಪರ್ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಂಜೆ 5 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನ ತುಂಬೆಲ್ಲಾ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳೇ ಇದ್ದ ಕಾರಣ, ಕೆಲವೇ ಕ್ಷಣಗಳಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದೆ.
ಗುರುವಾರ ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಗೊಲ್ಲರಹಟ್ಟಿ ಸಮೀಪದ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಕಟ್ಟಡವನ್ನೇ ವ್ಯಾಪಿಸಿದೆ. ಇದರೊಂದಿಗೆ ಗೋದಾಮಿನ ಒಳಗೆ ಸಂಗ್ರಹಿಸಿಟ್ಟಿದ್ದ ಟನ್ ಗಟ್ಟಲೆ ಪೇಪರ್ ಮತ್ತು ರಟ್ಟುಗಳು ಬೆಂಕಿಗೆ ಆಹುತಿಯಾಗಿವೆ.
ಏತನ್ಮಧ್ಯೆ, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಜೊತೆಗೆ ಘಟನೆಯಲ್ಲಿ ಯಾವುದೇ ಪ್ರಾಣಪಾಯ ವರದಿ ಆಗಿಲ್ಲ.


