BBMP
Loading ...

Rapido

ಬೈಕ್​ ಟ್ಯಾಕ್ಸಿ ಸೇವೆ ಬ್ಯಾನ್​ ಆದ ಎರಡು ತಿಂಗಳ ಬಳಿಕ ರಾಜ್ಯದಲ್ಲಿ ರೈಡ್-ಹೇಲಿಂಗ್ ಕಂಪನಿಗಳಾದ ರಾಪಿಡೋ ಮತ್ತು ಉಬರ್ ಬೈಕ್​ ಸೇವೆಗಳು ಇಂದಿನಿಂದ (ಆಗಸ್ಟ್ 21) ಪುನಾರಾಂಭಗೊಂಡಿವೆ. ಇದು ಸಹಸ್ರಾರು ಪ್ರಯಾಣಿಕರಿಗೆ ಹಾಗೂ ಬೈಕ್​ ಟ್ಯಾಕ್ಸಿಯಿಂದ ಜೀವನ ಸಾಗಿಸುತ್ತಿದ್ದ ಎಷ್ಟೋ ಮಂದಿಗೆ ಸಿಹಿ ಸುದ್ದಿಯಾಗಿದೆ.

ಇಂದು ಬೆಳಗ್ಗೆಯಿಂದಲೇ ಎರಡೂ ಪ್ಲಾಟ್‌ಫಾರ್ಮ್‌ಗಳು ಬೈಕ್ ಟ್ಯಾಕ್ಸಿ ಆಯ್ಕೆಗಳನ್ನು ಮತ್ತೆ ಸಕ್ರೀಯಗೊಳಿಸಿವೆ ಮತ್ತು ಬುಕಿಂಗ್‌ಗಳನ್ನು ಸ್ವೀಕರಿಸುತ್ತಿವೆ. ಆದರೆ ಓಲಾ ಇನ್ನೂ ಸೇವೆಯನ್ನು ಪುನರಾರಂಭಿಸಿಲ್ಲ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಬೈಕ್ ಟ್ಯಾಕ್ಸಿ ನೀತಿಯನ್ನು ರೂಪಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಹೈಕೋರ್ಟ್ ನಮಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಆದರೆ, ನ್ಯಾಯಾಲಯವು ಸೇವೆಗಳನ್ನು ಪುನರಾರಂಭಿಸಲು ಅನುಮತಿ ನೀಡಿಲ್ಲ. ಇದನ್ನು ನಾವು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನಿ ಕಂಟ್ರೋಲ್‌ಗೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.


ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್ 16 ರಿಂದ ಬ್ಯಾನ್​ ಮಾಡಲಾಗಿತ್ತು. ಇದರಿಂದ ಈ ಸೇವೆಯನ್ನು ಅವಲಂಬಿಸಿದ್ದ ಅನೇಕ ಮಂದಿ ಬೇರೆ ವಾಹನಗಳ ಕಡೆ ಮುಖ ಮಾಡಿದ್ದರು. ಇದರ ಪರಿಣಾಮ ಆಟೋ ರಿಕ್ಷಾದವರು ಕೂಡ ದರವನ್ನು ಹೆಚ್ಚಿಗೆ ಮಾಡಿದರು. ಇದು ವ್ಯಾಪಕ ಆಕ್ರೋಶಕ್ಕೂ ಗುರಿಯಾಯಿತು. ಇದೀಗ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಬೈಕ್​ ಟ್ಯಾಕ್ಸಿ ಪುನಾರಂಭಗೊಂಡಿದೆ.

ಹೈಕೋರ್ಟ್​ ಹೇಳಿದ್ದೇನು?
ಬೈಕ್ ಟ್ಯಾಕ್ಸಿಗಳ ಸೇವೆ ಕಾರ್ಯಾಚರಣೆ ಮುಂದುವರಿಸುವ ಸಂಬಂಧ ನಿಯಮ ರೂಪಿಸುವ ಬಗ್ಗೆ ಒಂದು ತಿಂಗಳಲ್ಲಿ ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ರಾಜಧಾನಿ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ನಗರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಆಪರೇಟರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ವಿಭು ಬಖ್ರು ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ದೇಶದಲ್ಲಿ ಪ್ರತಿಯೊಬ್ಬರಿಗೆ ನ್ಯಾಯಯುತವಾಗಿ ವ್ಯವಹಾರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಬೈಕ್ ಟ್ಯಾಕ್ಸಿ ಸೇವೆ ವಿಚಾರವಾಗಿ ಸರ್ಕಾರ ನಿಯಮ ರೂಪಿಸುವತ್ತ ಚಿತ್ತ ಹರಿಸಬಹುದು. ಈಗಾಗಲೇ 13 ರಾಜ್ಯಗಳು ನಿಯಮ ರೂಪಿಸಿವೆ. ಆದರೆ ನೀವು ನಿಷೇಧ ವಿಧಿಸಿದ್ದೀರಿ. ಈ ರೀತಿ ನಿಷೇಧ ಎಷ್ಟು ಸರಿ ಎಂಬುದನ್ನು ಪೀಠ ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಬೈಕ್ ಟ್ಯಾಕ್ಸಿ ಕಾರ್ಯಚರಣೆಯಿಂದ ಸಂಚಾರದಟ್ಟಣೆ ಉಂಟಾಗುವುದಿಲ್ಲ. ನಾಲ್ಕು ಚಕ್ರದ ವಾಹನ ಸಂಚರಿಸದ ಕಡೆ ದ್ವಿಚಕ್ರವಾಹನ ಚಲಾಯಿಸಬಹುದು. ಅಲ್ಲದೆ ಜೀವನೋಪಾಯಕ್ಕಾಗಿ ಅದೆಷ್ಟೋ ಮಂದಿ ಈ ಸೇವೆಯನ್ನೇ ಅವಲಂಬಿಸಿರುವುದನ್ನು ಪೀಠ ಗಮನಿಸಿದೆ. ಈ ಎಲ್ಲ ಅಂಶ ಪರಿಗಣಿಸಿ ಸರ್ಕಾರ ನೀತಿ ರೂಪಿಸುವುದಿದ್ದರೆ ಸಮಯ ನೀಡುತ್ತೇವೆ. ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಹೈಕೋರ್ಟ್ ನುಡಿಯಿತು. ನ್ಯಾಯಾಲಯದ ಸಲಹೆಗೆ ರಾಜ್ಯ ಸರ್ಕಾರದ ಪರ ಎಜಿ ಕೆ. ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, 4 ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆ ಎಂದರು. ಇದನ್ನು ಪರಿಗಣಿಸಿದ ಪೀಠ, ಸೆ.22ರೊಳಗೆ ಸರ್ಕಾರದ ನಿಲುವು ತಿಳಿಸಲು ಸೂಚಿಸಿ ವಿಚಾರಣೆ ಮುಂದೂಡಿದೆ.

ದೇಶದ ಹಲವು ರಾಜ್ಯ ಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಕೇವಲ ಕಾಯ್ದೆಗೆ ತಿದ್ದುಪಡಿ ಮೂಲಕ ದ್ವಿಚಕ್ರ ವಾಹನಗಳಿಗೆ ಬಾಡಿಗೆ ವಾಹನಗಳನ್ನಾಗಿ ಬಳಸಲು ಅವಕಾಶ ಕಲ್ಪಿಸಬಹುದಾಗಿದೆ. ಜತೆಗೆ ಬಿಳಿ ಬಣ್ಣದ ನಂಬರ್ ಫಲಕವನ್ನು ಹಸಿರು ಬಣ್ಣಕ್ಕೆ ಬದಲಾಯಿಸುವ ಅಗತ್ಯವಿದೆ. ಆದರೆ ಯಾವುದೇ ನಿಯಮ ಗಳನ್ನು ರೂಪಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *