BBMP
Loading ...

Ganesha

ಬೆಂಗಳೂರು: ಪ್ಲಾಸ್ಟರ್ ಆಫ್​​ ಪ್ಯಾರೀಸ್(ಪಿಒಪಿ) ವಸ್ತು ಬಳಸಿ ಗಣೇಶ ಮೂರ್ತಿ ತಯಾರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ತಯಾರಿಕರಿಗೆ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ. ಅಲ್ಲದೆ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ವಲಯದ ಅಧಿಕಾರಿಗಳು ಅಗತ್ಯ ಕ್ರಮವಹಿಸಲು ಸೂಚಿಸಿದೆ.

ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ನಗರದಲ್ಲಿ ಗಣೇಶ ಮೂರ್ತಿಗಳ ತಯಾರಿಕೆ ಪ್ರಾರಂಭವಾಗಿದೆ. ಮೂರ್ತಿ ತಯಾರಿಕೆಗೆ ಬಳಸುವ ರಾಸಾಯನಿಕ ಬಣ್ಣ, ಥರ್ಮಕೋಲ್ ಮತ್ತು ಪಿಒಪಿ ಬಳಕೆ ನಿರ್ಬಂಧಿಸಲಾಗಿದೆ. ಆದರೂ, ಈ ವಸ್ತುಗಳನ್ನು ಬಳಸಿ ತಯಾರಿಸುವ ಗಣೇಶ ಮೂರ್ತಿಗಳನ್ನು ವಶಪಡಿಸಿ ನಿಯಾಮಾನುಸಾರ ವಿಲೇವಾರಿಗೆ ಹಾಗೂ ಹಬ್ಬಗಳ ಆಚರಣೆಯಿಂದ ಬರುವ ಹಸಿ ತ್ಯಾಜ್ಯವನ್ನು ಪಾಲಿಕೆಯ ಸಂಸ್ಕರಣಾ ಘಟಕಗಳಿಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ, ಬಿಬಿಎಂಪಿ ಸೂಚಿಸಿದೆ.

ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಉಪವಿಭಾಗ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಿಸಲಾದ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಮತ್ತು ಸಂಬಂಧಪಟ್ಟ ಇಲಾಖೆಯ ಅಭಿಪ್ರಾಯ ಪಡೆದು ಏಕಗವಾಕ್ಷಿಯಲ್ಲಿ ತ್ವರಿತವಾಗಿ ಅನುಮತಿ ನೀಡಲು ಕ್ರಮಕೈಗೊಳ್ಳಬೇಕು.ಗಣೇಶ ಮೂರ್ತಿ ತಯಾರಿಸುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಪರಿಶೀಲಿಸಬೇಕು. ಪಿಒಪಿ ಬಳಸಿ ಗಣೇಶ ಮೂರ್ತಿ ತಯಾರಿಸಿದರೆ, ಮಾರಾಟ ಮಾಡುತ್ತಿದ್ದರೆ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವುಗಳನ್ನು ವಶಪಡಿಸಿಕೊಂಡ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿಗೊಳಿಸಬೇಕು. ಪರಿಸರ ಸ್ನೇಹಿ ಮತ್ತು ಮಣ್ಣಿನ ಮೂರ್ತಿ ಮಾತ್ರ ತಯಾರಿಸಲು ತಯಾರಿಕರಿಗೆ ಅರಿವು ಮೂಡಿಸಬೇಕು. ಮೂರ್ತಿ ವಿಸರ್ಜನೆ ಸಂಬಂಧ ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಬರುವ ಮಣ್ಣನ್ನು ಕೈತೋಟ ಮತ್ತು ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸಬೇಕು.

75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವ ಸಲುವಾಗಿ 75 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಒಂದೇ ಸ್ಥಳದಲ್ಲಿದ್ದು, ಅನುಮತಿ ಪತ್ರ ನೀಡಲಿದ್ದಾರೆ. ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ವಾರ್ಡ್‌ಗಳಲ್ಲಿ ವಿಸರ್ಜನೆ ಮತ್ತು ನಿಮಜ್ಜನ ಸ್ಥಳಗಳನ್ನು ಪಾಲಿಕೆ ಅಧಿಕಾರಿಗಳು ಗುರುತಿಸಬೇಕು. ವಾರ್ಡ್ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಮೂಲಕ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಬೇಕು.ಕೆರೆ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯ ತಡೆಗೆ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸಬೇಕು. ಮಣ್ಣು, ಪೂಜಾ ಹೂ ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಂಗಡಿಸಿ ಹಸಿತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಾಗೂ ಒಣತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿ ವಿಸರ್ಜಿಸಲು ಪ್ರತ್ಯೇಕ ತಂಡ ನೇಮಿಸಬೇಕು. ಕಿಯಾಸ್, ಆಂಬುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶ್ರೂಶೂಷಕಿ ನೇಮಿಸಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ(ಪಿಎಚ್‌ಸಿ) ಹೆಚ್ಚುವರಿ ಆಂಬುಲೆನ್ಸ್ ಮತ್ತು ವೈದ್ಯರು ಸಿದ್ಧವಿರುವಂತೆ ಕ್ರಮ ವಹಿಸಬೇಕು.

ವಲಯಕ್ಕೆ ಒಬ್ಬರು ಉಸ್ತುವಾರಿ
ವಲಯಕ್ಕೆ ಒಬ್ಬರನ್ನು ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಮತ್ತು ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನಾಗಿ ವಲಯ ಆಯುಕ್ತರು ನೇಮಿಸಬೇಕು. ವಿಸರ್ಜನಾ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ಒಳಗೊಂಡಂತೆ ಎನ್‌ಡಿಆರ್‌ಎ್ ತಂಡ ಹಾಜರಿರುವಂತೆ ಕ್ರಮವಹಿಸಬೇಕು. ವಲಯ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡಿದರೆ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು. ಕೆಲ ಷರತ್ತುಗೊಳಪಡಿಸಿ ಹಬ್ಬ ಆಚರಣೆಗೆ ಅಧಿಕಾರಿಗಳು ಅನುಮತಿ ನೀಡಬೇಕು.

Leave a Reply

Your email address will not be published. Required fields are marked *